ಬೆಂಗಳೂರು, ನ.28 (DaijiworldNews/PY): "ಪುನೀತ್ ರಾಜ್ಕುಮಾರ್ ಅವರು ಅಭಿನಯದೊಂದಿಗೆ ಸಮಾಜಮುಖಿ ಕಾರ್ಯಗಳ ಮೂಲಕ ಜನಸೇವೆಯಲ್ಲಿ ತೊಡಗಲು ಸದಾ ಪ್ರೇರಕ ಶಕ್ತಿಯಾಗಿ ಚಿರಾಯುವಾಗಿರುತ್ತಾರೆ" ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದ್ಧಾರೆ.
ಟೀಮ್ ದ್ವಿಚಕ್ರ ಹಾಗೂ ಇಂಚರ ಸ್ಟುಡಿಯೊ ವತಿಯಿಂದ ಅಪ್ಪು ಅಗಲಿದ ಒಂದು ತಿಂಗಳ ನೆನಪಿಗಾಗಿ ಭಾನುವಾರ ಏರ್ಪಡಿಸಿದ್ದ 'ರೈಡ್ ಫಾರ್ ಅಪ್ಪು' ಬೈಕ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜತೆಗಿರದ ಜೀವ ಎಂದೆಂದಿಗೂ ಜೀವಂತ" ಎಂಬಂತೆ ಅಪ್ಪು ಅವರ ಸಾಧನೆಗಳನ್ನು ನಾಡಿನ ಮನೆ-ಮನಗಳಿಗೆ ತಲುಪಿಸಿ ಅವರನ್ನು ಚಿರಾಯುವಾಗಿಸುತ್ತಿರುವ ಅಭಿಮಾನಿಗಳು, ಹಿತೈಷಿಗಳಿಗೆ ಒಳ್ಳೆಯದಾಗಲಿ ಎಂದಿದ್ಧಾರೆ.
"ಪುನೀತ್ ಅವರ ಸಾಧನೆಯು ದಿನದಿನವೂ ಹೆಚ್ಚೆಚ್ಚು ಜನರನ್ನು ತಲುಪುತ್ತಿದೆ. ವಿದ್ಯಾರ್ಥಿ ಸಮೂಹ ಸೇರಿದಂತೆ ಇದು ಎಲ್ಲರಿಗೂ ಸ್ಪೂರ್ತಿಯಾಗಬೇಕು" ಎಂದು ತಿಳಿಸಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಿಂದ ಅಪ್ಪು ಸಮಾಧಿಯವರೆಗೆ ನಡೆದ ಮೆರವಣಿಗೆಯಲ್ಲಿ 200 ಬೈಕ್ ಸವಾರರು ಭಾಗವಹಿಸಿದ್ದರು. ಹೆಲ್ಮೆಟ್ ಧರಿಸುವುದರ ಮಹತ್ವ ತಿಳಿಸುವ ಜಾಹೀರಾತಿನ ಮೂಲಕ ಪುನೀತ್ ಅವರು ರಸ್ತೆ ಸುರಕ್ಷತೆಯ ಅರಿವು ಮೂಡಿಸಿದ್ದನ್ನು ನೆನೆದು, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಹೆಲ್ಮೆಟ್ ಧರಿಸಿದ್ದರು. ಸಚಿವ ಅಶ್ವತ್ಥ್ ನಾರಾಯಣ ಅವರು ಸಹ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.