ಬೆಂಗಳೂರು, ನ.28 (DaijiworldNews/PY): "ಹೊಸ ರೂಪಾಂತರಿ ಓಮ್ರಿಕಾನ್ ರಾಜ್ಯಕ್ಕೆ ಇನ್ನೂ ಪ್ರವೇಶಿಸಿಲ್ಲ" ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಾಸಿಟಿವ್ ಬಂದವರನ್ನು ಹೊರಗೆ ಬಿಡದೇ, ಪ್ರತ್ಯೇಕವಾಗಿಟ್ಟು ಪ್ರಯಾಣಿಕರ ಗಂಟಲು ದ್ರವದ ಜಿನೋಮ್ ಪರೀಕ್ಷೆ ಮಾಡಿಸುತ್ತಿದ್ದೇವೆ. ಇನ್ನು ವಿಮಾನ ನಿಲ್ದಾಣದಲ್ಲಿ ಪ್ರತಿಯೋರ್ವರ ಪರೀಕ್ಷೆ ಮಾಡಿಸಿ ಅಲ್ಲಿಯೇ ವರದಿ ನೀಡುವ ಕೆಲಸವಾಗುತ್ತಿದೆ" ಎಂದು ಹೇಳಿದ್ದಾರೆ.
"ಕೇಂದ್ರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರೊಂದಿಗೆ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡುವ ಬಗ್ಗೆ ಮಾತನಾಡಿದ್ದೇನೆ. ಜಿನೋಮಿಕ್ ಸೀಕ್ವೆನ್ಸ್ ಅನ್ನು ಪ್ರಯೋಗಾಲಯಕ್ಕೆ ನೀಡಿದಲ್ಲಿ ವರದಿ ಬರಲು 8-10 ದಿನಗಳು ಬೇಕು. ಹಾಗಾಗಿ ಈ ಬಗ್ಗೆ ಡಿ.1ರ ವೇಳೆಗೆ ಸ್ಪಷ್ಟವಾಗಿ ತಿಳಿದುಬರಲಿದೆ" ಎಂದು ತಿಳಿಸಿದ್ದಾರೆ.
"ವಿಮಾನ ನಿಲ್ದಾಣ ಸೇರಿದಂತೆ, ಕೇರಳ-ಮಹಾರಾಷ್ಟ್ರ ಗಡಿಭಾಗಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ" ಎಂದಿದ್ದಾರೆ.