ನವದೆಹಲಿ, ನ. 28 (DaijiworldNews/HR): ಬೀಜಿಂಗ್ ಜನತಾ ಪಕ್ಷವಾಗಿ ಬಿಜೆಪಿಯು ಪರಿವರ್ತನೆಯಾಗಿದೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಅರುಣಾಚಲ ಪ್ರದೇಶದಲ್ಲಿ ಹಳ್ಳಿಗಳನ್ನು ನಿರ್ಮಿಸಲು ಚೀನಾ ದೇಶಕ್ಕೆ ಬಿಜೆಪಿ ಸರ್ಕಾರವು ಅವಕಾಶ ನೀಡಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಚೀನಾದ ವಿಮಾನ ನಿಲ್ದಾಣವೊಂದನ್ನು ತನ್ನದೆಂದು ತೋರಿಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಲಡಾಖ್ನಲ್ಲಿನ ಪ್ರದೇಶವನ್ನು ಬಿಜೆಪಿ ಸರ್ಕಾರವು ಚೀನಾಕ್ಕೆ ಬಿಟ್ಟುಕೊಟ್ಟಿದೆ ಎಂದು ವಾಗ್ದಾಳಿ ನಡೆಸಿರುವ ಅವರು, ಬಿಜೆಪಿಯು ಬೀಜಿಂಗ್ ಜನತಾ ಪಕ್ಷವಾಗಿ ಪರಿವರ್ತನೆಯಾಗಿದೆ ಎಂದು ಟೀಕಿಸಿದ್ದಾರೆ.