ನವದೆಹಲಿ, ನ. 28 (DaijiworldNews/HR): ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಹಿಂಪಡೆಯಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ರೈತರ ಬಗ್ಗೆ ಬಿಜೆಪಿ ಸರ್ಕಾರ ಯಾವಾಗಲೂ ಸಹಾನುಭೂತಿ ಹೊಂದಿದ್ದು, ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ" ಎಂದರು.
ಇನ್ನು ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಮೋದಿ ಘೋಷಿಸಿದ್ದು, ಕಾಯ್ದೆಗಳ ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.
ನವೆಂಬರ್ 29 ರಿಂದ ಡಿಸೆಂಬರ್ 23ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನಡೆಸುವಂತೆ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸು ಮಾಡಿದೆ.