ನವದೆಹಲಿ, ನ. 27 (DaijiworldNews/HR): ಗುರುನಾನಕ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸಿಖ್ಬ ಜಾಥಾದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದ ಕೋಲ್ಕತಾ ಮೂಲದ ವಿವಾಹಿತ ಮಹಿಳೆಯೊಬ್ಬಳು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಲಾಹೋರ್ ಮೂಲದ ವ್ಯಕ್ತಿಯನ್ನು ವಿವಾಹವಾಗಿರುವ ಘಟನೆ ತಡವಾಗಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಸಿಖ್ಖ ಯಾತ್ರಾರ್ಥಿಗಳ ಜತೆ ತೆರಳಿದ್ದ ಕೋಲ್ಕತಾ ಮೂಲದ ರಂಜಿತ್ ಕೌರ್ ಎಂಬಾಕೆ ಇಸ್ಲಾಂಗೆ ಮತಾಂತರಗೊಂಡು, ಲಾಹೋರ್ ಮೂಲದ ಮುಹಮ್ಮದ್ ಇಮ್ರಾನ್ ಎಂಬಾತನನ್ನು ವಿವಾಹವಾಗಿದ್ದಾಳೆ.
ರಂಜಿತ್ ಕೌರ್ ಮತ್ತು ಆಕೆಯ ಪತಿ ಪರಮ್ ದೀಪ್ ಸಿಂಗ್ ಕಿವುಡ ಮತ್ತು ಮೂಕರಾಗಿದ್ದು, ಮುಹಮ್ಮದ್ ಇಮ್ರಾನ್ ಕೂಡಾ ಕಿವುಡ ಮತ್ತು ಮೂಗನಾಗಿರುವುದಾಗಿ ವರದಿ ಹೇಳಿದೆ.
ಇನ್ನು ಕೌರ್ ಸಾಮಾಜಿಕ ಜಾಲತಾಣದ ಮೂಲಕ ಮುಹಮ್ಮದ್ ಇಮ್ರಾನ್ ನ ಪರಿಚಯವಾಗಿದ್ದು, ಈ ವಿಷಯ ಆಕೆಯ ಪತಿಗೂ ತಿಳಿದಿತ್ತು. ರಂಜಿತ್ ಕೌರ್ ತನ್ನ ಹೆಸರನ್ನು ಪರ್ವೀನ್ ಸುಲ್ತಾನಾ ಎಂದು ಬದಲಾಯಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಮುಹಮ್ಮದ್ ಇಮ್ರಾನ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜನ್ ಪುರ್ ನಿವಾಸಿಯಾಗಿದ್ದಾನೆ.
ಪಾಕಿಸ್ತಾನದ ಕೋರ್ಟ್ ನಲ್ಲಿ ಭಾರತೀಯ ಮೂಲದ ಪತಿಯಿಂದ ರಂಜಿತ್ ಕೌರ್ ವಿಚ್ಛೇದನ ಪಡೆದುಕೊಂಡ ನಂತರ ಲಾಹೋರ್ ನಲ್ಲಿ ಇಮ್ರಾನ್ ಜತೆ ವಿವಾಹವಾಗಿರುವುದಾಗಿ ವರದಿ ತಿಳಿಸಿದೆ.