ನವದೆಹಲಿ, ನ.27 (DaijiworldNews/PY): ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿದ್ದ ಸಭೆ ಮುಕ್ತಾಯವಾಗಿದ್ದು, ಸಭೆಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ರದ್ದುಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.
"ನವೆಂಬರ್ 29ರಂದು ನಡೆಸಲು ತೀರ್ಮಾನಿಸಿದ ಟ್ರ್ಯಾಕ್ಟರ್ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ" ಎಂದು ಕಿಸಾನ್ ಯೂನಿಯನ್ ಹೇಳಿಕೆ ನೀಡಿದೆ.
ಮುಂದಿನ ತಿಂಗಳಿನಲ್ಲಿ ಸಭೆ ನಡೆಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನಿಸುವುದಾಗಿ ರೈತ ನಾಯಕರುಗಳು ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ. ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಎಂಎಸ್ಪಿಗೆ ಸಂಬಂಧಿಸಿದಂತೆ ಸಮಿತಿಯ ರಚನೆ ಮಾಡಬೇಕು. ಪ್ರಧಾನಿ ಅವರಿಗೆ ಡಿ.4ರವರೆಗೆ ಉತ್ತರಿಸಲು ಅವಕಾಶ ನೀಡಿದ್ದೇವೆ. ನಿಜವಾಗಿ ಟ್ರ್ಯಾಕ್ಟರ್ ರ್ಯಾಲಿಯನ್ನು ಹಿಂಪಡೆದಿಲ್ಲ, ಬದಲಾಗಿ ಸ್ಥಗಿತಗೊಳಿಸಿದ್ದೇವೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುತ್ತೇವೆ" ಎಂದು ಹೇಳಿದೆ.
ಚಳಿಗಾಲದ ಅಧಿವೇಶನದಲ್ಲಿ ಮೂರು ಕೇಂದ್ರ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಲು ಹಾಗೂ ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ ರೈತ ನಾಯಕರು ಒತ್ತಾಯಿಸಿದ್ಧಾರೆ.