ಬೆಂಗಳೂರು, ನ.27 (DaijiworldNews/PY): "ಧಾರವಾಡ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ, ಶಾಲೆಗಳಲ್ಲಿ ಹಾಗೂ ಕೇರಳದಲ್ಲಿ ಸೋಂಕು ಹೆಚ್ಚಾಗುತ್ತಿರುವ ಕುರಿತು ಶೀಘ್ರವೇ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಇಂದು ಸಂಜೆ ಸಭೆ ನಡೆಸಲಿದ್ದೇವೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಭೆಯಲ್ಲಿ ಹೊಸ ತಳಿ ಕುರಿತೂ ಚರ್ಚಿಸಲಾಗುತ್ತದೆ. ಹೊಸ ತಳಿಯ ಬಗ್ಗೆ ಮುಂಜಾಗ್ರತಾ ಕ್ರಮದ ಬಗ್ಗೆಯೂ ಚರ್ಚಿಸಲಿದ್ದೇವೆ" ಎಂದಿದ್ದಾರೆ.
ಸರ್ಕಾರದಲ್ಲಿ ಹಲವು ಕಡತ ವಿಲೇವಾರಿಗಳ ವಿಳಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೆಲವು ಇಲಾಖೆಗಳಲ್ಲಿ ಕಡತ ವಿಲೇವಾರಿ ಆಗಿಲ್ಲ. ಈ ಪೈಲ್ಗಳು ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣಗಳಿಂದ ನಿರ್ಣಯವಾಗಿಲ್ಲ. ಈ ಬಗ್ಗೆ ಈಗಾಗಲೇ ಒಂದು ಸಭೆ ನಡೆಸಿದ್ದೇನೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ಕಲಬುರ್ಗಿ ಆಯುಕ್ತ ಸ್ನೇಹಲ್ ಕಂಡೇಲ್ ವಿರುದ್ದ ಯುವತಿ ದೂರು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ಕಚೇರಿಗೆ ಹೋಗಿ ಗಮನಿಸುತ್ತೇನೆ" ಎಂದು ಹೇಳಿದ್ದಾರೆ.