ನವದೆಹಲಿ, ನ.27 (DaijiworldNews/PY): "ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದು, ಹಾಗಾಗಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಹೋರಾಟವನ್ನು ನಿಲ್ಲಿಸಿ ಮನೆಗೆ ತೆರಳಿ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.
"ಮೂರು ಕೃಷಿ ಕಾಯ್ದೆಗಳನ್ನು ಸಂಸತ್ನ ಚಳಿಗಾಲದ ಅಧಿವೇಶನದ ಮೊದನ ದಿನವೇ ರದ್ದುಪಡಿಸುವ ಮಸೂದೆ ಮಂಡಿಸಲಾಗುವುದು. ಶೂನ್ಯ ಬಜೆಟ್ ಕೃಷಿ ಸೇರಿದಂತೆ ಬೆಳೆಗಳ ವೈವಿಧ್ಯತೆ ಹಾಗೂ ಎಂಎಸ್ಪಿ ವ್ಯವಸ್ಥೆ ಹೆಚ್ಚು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ" ಎಂದು ತಿಳಿಸಿದ್ದಾರೆ.
"ರೈತ ಸಂಘಟನೆಯ ಮುಖಂಡರು ಸಹ ಈ ಸಮಿತಿಯ ಪ್ರತಿನಿಧಿಗಳಾಗಿರುತ್ತಾರೆ. ಈ ಸಮಿತಿಯ ರಚನೆಯಿಂದ ರೈತರ ಎಂಎಸ್ಪಿ ಬೇಡಿಕೆ ಸಹ ಈಡೇರಲಿದೆ" ಎಂದಿದ್ದಾರೆ .
ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ ಬಳಿಕವೂ ರೈತರು ಪ್ರತಿಭಟನೆ ಮುಂದುವರಿಸುವುದರಲ್ಲಿ ಸೂಕ್ತವಲ್ಲ. ಈ ಹಿನ್ನೆಲೆ ರೈತರು ಪ್ರತಿಭಟನೆ ಕೈಬಿಟ್ಟು ಮನೆಗೆ ತೆರಳುವಂತೆ ಮನವಿ ಮಾಡಿಕೊಂಡಿದ್ದಾರೆ.