ಬೆಂಗಳೂರು, ನ.27 (DaijiworldNews/PY): "ನಮ್ಮ ಮಕ್ಕಳ ಜೀವದ ಜತೆ ಚೆಲ್ಲಾಟ ಆಡುತ್ತಿರುವ ನೀಟ್ ಪರೀಕ್ಷೆ ಬಗ್ಗೆ ನಾವು ಮರು ಆಲೋಚನೆ ಮಾಡಬೇಕಿದೆ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, "ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿಯಲ್ಲಿ ಶೇ.96ರಷ್ಟು ಅಂಕ ಗಳಿಸಿದ್ದರೂ ಅವರಿಗೆ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದೇ ಸರಕಾರಿ ಸೀಟು ಸಿಗಲಿಲ್ಲ. ಈ ಕಾರಣಕ್ಕೆ ಆ ಹೆಣ್ಣುಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
ಸೊರಬ ತಾಲೂಕಿನ ಚನ್ನಪಟ್ಟಣ ಗ್ರಾಮದ ಸಂಕಲ್ಪ ಎಂಬ ವಿದ್ಯಾರ್ಥಿನಿ ಸಾವಿಗೆ ಶರಣಾಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಹೀಗೆ ಜೀವವನ್ನು ಕೊನೆ ಮಾಡಿಕೊಂಡ ಆ ಯುವತಿಯ ದುರ್ಮರಣ ಎಲ್ಲರಿಗೂ ಪಾಠ ಆಗಬೇಕಿದೆ" ಎಂದಿದ್ದಾರೆ.
"ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಹಾಗೂ ಉನ್ನತ ಶಿಕ್ಷಣ ಬಡ, ಸಾಮಾನ್ಯ ಮಕ್ಕಳಿಗೂ ಸಿಗಬೇಕು ಎನ್ನುವ ಕಾಳಜಿಯ ಜತೆಗೆ, ಯಾರೇ ವಿದ್ಯಾರ್ಥಿಗಳು ಸೀಟು ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಂಕಲ್ಪ ಅವರಂತೆ ಬದುಕನ್ನು ಕೊನೆ ಮಾಡಿಕೊಳ್ಳಬಾರದು" ಎಂದು ಮನವಿ ಮಾಡಿಕೊಂಡಿದ್ದಾರೆ.
"ಅವಕಾಶಗಳು ಆಕಾಶದಷ್ಟು ಇವೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮಾರ್ಗಗಳು ಕೂಡ ಇವೆ. ದೃಢ ಸಂಕಲ್ಪದೊಂದಿಗೆ ಭವಿಷ್ಯ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಂಕಲ್ಪ ಅವರಂತೆ ಜೀವ ತೆಗೆದುಕೊಳ್ಳಬಾರದು. ಇದು ನನ್ನ ಕಳಕಳಿಯ ಮನವಿ" ಎಂದಿದ್ದಾರೆ.
"ನಮ್ಮ ಮಕ್ಕಳ ಜೀವದ ಜತೆ ಚೆಲ್ಲಾಟ ಆಡುತ್ತಿರುವ ನೀಟ್ ಪರೀಕ್ಷೆ ಬಗ್ಗೆ ನಾವು ಮರು ಆಲೋಚನೆ ಮಾಡಬೇಕಿದೆ. ಈಗಾಗಲೇ ತಮಿಳುನಾಡು ಸರಕಾರ ನೀಟ್ ವಿರುದ್ಧ ನಿರ್ಣಯ ಕೈಗೊಂಡಿದೆ. ನಮ್ಮ ಸರಕಾರವೂ ಇಂತಹ ನಿಲುವಿಗೆ ಬರಲಿ. ರಾಜ್ಯದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಸಂಕಲ್ಪ ಅವರ ಹಾದಿ ಹಿಡಿಯುವುದನ್ನು ತಪ್ಪಿಸಬೇಕು" ಎಂದು ತಿಳಿಸಿದ್ದಾರೆ.
ಎಂಬಿಬಿಎಸ್ ಪದವಿ ಪಡೆದು ವೈದ್ಯೆಯಾಗಬೇಕು ಎನ್ನುವ ಕನಸು ಈಡೇರಲಿಲ್ಲ ಎಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಸಂಕಲ್ಪ, ದ್ವಿತೀಯ ಪಿಯುಸಿ (ವಿಜ್ಞಾನ) ಯಲ್ಲಿ ಶೇ. 96 ಅಂಕ ಪಡೆದು ಉತ್ತೀರ್ಣಳಾಗಿದ್ದಳು. ಎಂಬಿಬಿಎಸ್ ಓದಬೇಕು ಎನ್ನುವ ಕನಸು ಕಂಡಿದ್ದ ಸಂಕಲ್ಪ ಎರಡು ಬಾರಿ ನೀಟ್ ಪರೀಕ್ಷೆ ಬರೆದರೂ ಸಹ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಮನನೊಂದು ಆಕೆ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.