ಬೆಂಗಳೂರು, ನ.27 (DaijiworldNews/PY): "ನಾಲ್ಕು ದೇಶಗಳಲ್ಲಿ ರೂಪಾಂತರಿ ಒಮಿಕ್ರೋನ್ ಪತ್ತೆಯಾಗಿದೆ. ತೀವ್ರತೆ ಬಗ್ಗೆ ವಿಶ್ವಸಂಸ್ಥೆಯಿಂದ ಅಧ್ಯಯನ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ" ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
"ರೂಪಾಂತರಿ ಕೊರೊನಾ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೇ ಮಾಹಿತಿ ನೀಡಿದೆ. ಈ ಬಗ್ಗೆ ಯಾರೂ ಭಯಪಡುವ ಅಗತ್ಯ ಇಲ್ಲ. ಎಚ್ಚರಿಕೆಯ ಅಗತ್ಯವಿದೆ" ಎಂದಿದ್ದಾರೆ.
"ವಿದೇಶದಿಂದ ಬರುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಮಾರ್ಗಸೂಚಿಯೂ ಪ್ರಕಟಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಟೆಸ್ಟ್ ಕಡ್ಡಾಯವಾಗಿದ್ದು, ನೆಗೆಟಿವ್ ಬಂದರೂ ಸಹ ಒಂದು ವಾರ ಹೋಂ ಕ್ವಾರಂಟೈನ್ನಲ್ಲಿರಬೇಕಿದೆ. ವಾರದ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು" ಎಂದು ಹೇಳಿದ್ದಾರೆ.
"45 ಲಕ್ಷ ಮಂದಿ ಎರಡನೇ ಡೋಸ್ ಪಡೆದುಕೊಂಡಿಲ್ಲ. ದಯಮಾಡಿ ಎರಡನೇ ಡೋಸ್ ಹಾಕಿಸಿಕೊಳ್ಳಿ. ಸುಮ್ಮನೆ ಆತಂಕ ಸೃಷ್ಟಿ ಮಾಡುವುದು ಬೇಡ. ಅವಧಿ ಮುಗಿದರೂ ಸಹ ಕೆಲವರು ಲಸಿಕೆ ಪಡೆದಿಲ್ಲ. ಉದಾಸೀನ ತೋರದೇ ಲಸಿಕೆ ಪಡೆದುಕೊಳ್ಳಲಿ" ಎಂದು ಮನವಿ ಮಾಡಿದ್ದಾರೆ.
"ಈಗಾಗಲೇ ಹೊಸ ತಳಿ ವೈರಸ್ ಬಗ್ಗೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗ ಲಕ್ಷಣಗಳು ಮೊದಲಿನಂತೆಯೇ ಇವೆ. ಇದು ಡೆಲ್ಟಾಗಿಂತ ಗಂಭೀರವಾಗಿದೆ ಎನ್ನುವುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪರಿಶೀಲನೆ ನಡೆಸಿದೆ" ಎಂದು ತಿಳಿಸಿದ್ದಾರೆ.