ನವದೆಹಲಿ, ನ 27 (DaijiworldNews/MS): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಕೋವಿಡ್-19 ಮತ್ತು ವ್ಯಾಕ್ಸಿನೇಷನ್ ಪರಿಸ್ಥಿತಿ ಕುರಿತು ಬೆಳಿಗ್ಗೆಉನ್ನತ ಸರ್ಕಾರಿ ಅಧಿಕಾರಿಗಳು ಭಾಗವಹಿಸುವ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೊರೊನಾ ವೈರಸ್ ನ ಬಿ.1.1.529 ರೂಪಾಂತರಿ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಕಾಳಜಿಯ ನಡುವೆ ಈ ಸಭೆ ನಡೆಸಲಾಗುತ್ತಿದೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಹೊಸ ಕೊವೀಡ್-19 ರೂಪಾಂತರದ 'ಓಮಿಕ್ರಾನ್' ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ ಭಾರತವು ಹಲವಾರು ದೇಶಗಳನ್ನು ಕೊವೀಡ್ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮ ಅನುಸರಿಸುವ ಪಟ್ಟಿಗೆ ಸೇರಿಸಿದೆ.
ಬಿ.1.1.529 ರೂಪಾಂತರವು ಈ ವಾರದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಬೋಟ್ಸ್ವಾನಾ, ಹಾಂಗ್ ಕಾಂಗ್, ಇಸ್ರೇಲ್ ಮತ್ತು ಬೆಲ್ಜಿಯಂನಲ್ಲಿ – 50 ರೂಪಾಂತರಿ ಪ್ರಕರಣಗಳು ಪತ್ತೆಯಾಗಿದೆ
ಹಿಂದಿನ ರೂಪಾಂತರಗಳಿಗಿಂತ ಇದು ಹೆಚ್ಚು ಹರಡುತ್ತದೆಯೇ ಅಥವಾ ಮಾರಕವಾಗಿದೆಯೇ ಎಂದು ಸಂಶೋಧಕರು ಇನ್ನೂ ಖಚಿತಪಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಐರೋಪ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಸಿಂಗಾಪುರ, ಹಾಂಗ್ಕಾಂಗ್, ಇಸ್ರೆಲ್ನಿಂದ ಭಾರತಕ್ಕೆ ಬರುವವರಿಗೆ ಕೊವೀಡ್ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮ ಅನುಸರಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಭಾರತದಲ್ಲಿ ಶನಿವಾರ 8,318 ಹೊಸ COVID-19 ಪ್ರಕರಣಗಳು ವರದಿಯಾಗಿದ್ದು, ಸೋಂಕಿಗೆ ಒಳಗಾಗಿ ಕಳೆದ 24 ಗಂಟೆಗಳಲ್ಲಿ 465 ಸಾವುಗಳು ಸಂಭವಿಸಿವೆ.