ಧಾರವಾಡ, ನ.27 (DaijiworldNews/PY): ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ 77 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 281ಕ್ಕೆ ಏರಿಕೆಯಾಗಿದೆ.
ಶುಕ್ರವಾರ ರಾತ್ರಿಯವರೆಗೆ 204 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈಗ 77 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ನಿತೀಶ್ ಜೆ ಪಾಟೀಲ್ ಮಾಹಿತಿ ನೀಡಿದ್ದು, "ಎಲ್ಲರಿಗೂ ಚಿಕಿತ್ಸೆ ಔಷಧೋಪಚಾರ ನಡೆಯುತ್ತಿದೆ. ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ತಪಾಸಣೆಗೆ ಒಳಪಟ್ಟವರನ್ನು ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ. 1,822 ಮಂದಿಯ ತಪಾಸಣೆ ವರದಿ ಇನ್ನು ಬರಬೇಕಿದೆ" ಎಂದಿದ್ದಾರೆ.
"ವರದಿಯಾಗಿರುವ 281 ಪ್ರಕರಣಗಳ ಪೈಕಿ ಆರು ಮಂದಿಯಲ್ಲಿ ಮಾತ್ರವೇ ರೋಗದ ಸಾಮಾನ್ಯ ಲಕ್ಷಣಗಳಿವೆ. ಉಳಿದ 275 ಮಂದಿಯಲ್ಲಿ ರೋಗದ ಲಕ್ಷಣಗಳಿಲ್ಲ. ಯಾವುದೇ ಸಾವು ಸಂಭವಿಸಿಲ್ಲ" ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆ ಭಾನುವಾರದ ತನಕ ಎಸ್ಡಿಎಂ ಹೊರರೋಗಿಗಳ ವಿಭಾಗದ ಸೇವೆ ಸ್ಥಗಿತಗೊಳಿಸಲಾಗಿದೆ. ತುರ್ತು ಚಿಕಿತ್ಸಾ ಸೇವೆ ಮುಂದುವರೆಯಲಿದ್ದು, ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
"ಕೊರೊನಾ ಸೋಂಕು ಹರಡುತ್ತಿರುವುದನ್ನು ನಿಯಂತ್ರಿಸಲು ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಎಸ್ಡಿಎಂ ಆಡಳಿತ ಮಂಡಳಿಯು ಕೂಡಲೇ ಸ್ಪಷ್ಟ ಕ್ರಿಯಾಯೋಜನೆ ರೂಪಿಸಿಕೊಂಡು ಆಸ್ಪತ್ರೆ ಆವರಣಕ್ಕೆ ಆಯ್ದ ಕೆಲವು ವೈದ್ಯರು ಹಾಗೂ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು" ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ. ರವಿಕುಮಾರ ಸುರಪುರ ಹೇಳಿದ್ದಾರೆ.
ಎಸ್ಡಿಎಂ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಕಾಲೇಜಿನ ಸುತ್ತಲಿನ 500 ಮೀ. ವ್ಯಾಪ್ತಿಯ ಶಾಲೆ ಕಾಲೇಜುಗಳಿಗೆ ಭಾನುವಾರದವರೆಗೆ ರಜೆ ಘೋಷಿಸಲಾಗಿದೆ.