ಚಿಕ್ಕಬಳ್ಳಾಪುರ, ನ.27 (DaijiworldNews/PY): "ಯಾರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಬಲ ನೀಡಬೇಕು ಎನ್ನುವುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇವೆ" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಜಯ ಸಾಧಿಸಿದರು. ದೇವೇಗೌಡರು ಸಿಂದಗಿ ಚುನಾವಣೆಯ ಸಂದರ್ಭ ನೀರಾವರಿ ವ್ಯವಸ್ಥೆ ಮಾಡಿದ ಕಾರಣ ಅನ್ನ ತಿನ್ನುತ್ತಿದ್ದೇವೆ ಎಂದು ಅಲ್ಲಿನ ಜನರು ಹೇಳಿದರು. ಆ ಕ್ಷೇತ್ರದ 22 ಸಾವಿರ ಕುಟುಂಬಗಳ ಸಾಲ ಮನ್ನಾ ಮಾಡಿದ್ದೇನೆ. ಆದರೆ ನಮ್ಮ ಪಕ್ಷದ ಅಭ್ಯರ್ಥಿಗೆ ಸಿಕ್ಕಿದ್ದು 4 ಸಾವಿರ ಮತಗಳು" ಎಂದಿದ್ದಾರೆ.
"ನಾವು ಕಾಂಗ್ರೆಸ್ ಹಾಗೂ ಬಿಜೆಪಿ ಸಖ್ಯ ಮಾಡಿಯೇ ಹಾಳಾಗಿದ್ದೇವೆ. ಅವರ ಸಹವಾಸವೂ ನಮಗೆ ಬೇಡ. 2023ರ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲಬೇಕು ಎನ್ನುವುದೇ ನಮ್ಮ ಗುರಿ" ಎಂದು ತಿಳಿಸಿದ್ದಾರೆ.
"ಜೆಡಿಎಸ್ ಪರಿಷತ್ ಚುನಾವಣೆಯ ಆರು ಕ್ಷೇತ್ರಗಳಲ್ಲಿ ಗೆದ್ದಿದೆ. ಉಳಿದ ಕ್ಷೇತ್ರಗಳಲ್ಲಿ ಯಾವ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ತೀರ್ಮಾನ ಕೈಗೊಳ್ಳುವ ಶಕ್ತಿ ಜೆಡಿಎಸ್ಗೆ ಇದೆ" ಎಂದು ಹೇಳಿದ್ದಾರೆ.
"ಮಳೆಯಿಂದ 5 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರೆ, ಕೃಷಿ ಸಚಿವರು 10 ಲಕ್ಷ ಹೆಕ್ಟೇರ್ ಎನ್ನುತ್ತಾರೆ. ಇವರಿಬ್ಬರಿಗೆ ವರದಿ ಕೊಟ್ಟವರು ಯಾರು?. ಇವರಿಬ್ಬರ ನಡುವೆ ಹೊಂದಾಣಿಕೆಯೇ ಇಲ್ಲ" ಎಂದು ಟೀಕಿಸಿದ್ದಾರೆ.