ನವದೆಹಲಿ, ನ 27 (DaijiworldNews/MS): ಮಹಾಮಾರಿ ಕೊರೋನಾ ಹೊಸ ತಳಿ B.1.1.529 ವೈರಸ್ (ಬೋಟ್ಸ್ವಾನಾ ರೂಪಾಂತರಿ) ಮತ್ತೆ ಐರೋಪ್ಯ ಒಕ್ಕೂಟದ ಬೆಲ್ಜಿಯಂ, ಇಸ್ರೇಲ್ನಲ್ಲಿ ಪತ್ತೆಯಾಗಿದ್ದು ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಕೆಲ ನಿರ್ದಿಷ್ಟ ದೇಶಗಳಿಂದ ಆಗಮಿಸುವವರಿಗೆ ಟೆಸ್ಟ್ ಕಡ್ಡಾಯಗೊಳಿಸಿದ್ದು ಮತ್ತೆ ಬಿಗಿ ತಪಾಸಣೆ ಕ್ರಮಕ್ಕೆ ಮುಂದಾಗಿದೆ.
ಐರೋಪ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಸಿಂಗಾಪುರ, ಹಾಂಗ್ಕಾಂಗ್, ಇಸ್ರೆಲ್ನಿಂದ ಭಾರತಕ್ಕೆ ಬರುವವರಿಗೆ ಕೊವೀಡ್ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮ ಅನುಸರಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ ಸೋಂಕಿನ ಹೊಸ ತಳಿ ಭಾರೀ ಅಪಾಯಕಾರಿಯಾಗಿದೆ. ಈ ರೂಪಾಂತರಿ ವೈರಸ್ ಡೆಲ್ಟಾ ವೈರಸ್ಗಿಂತಲೂ ಅಪಾಯಕಾರಿಯಾಗಿದೆ. ಶುಕ್ರವಾರ ಒಂದೇ ದಿನ ಪಶ್ಚಿಮ ಯುರೋಪ್ನಲ್ಲಿ 76 ಸಾವಿರ ಕೇಸುಗಳು ದೃಢಪಟ್ಟಿವೆ.
ಮುಂಜಾಗ್ರತಾ ಕ್ರಮವಾಗಿ ವಿಶ್ವಸಂಸ್ಥೆ ತುರ್ತು ಸಭೆ ಕರೆದಿದ್ದು ಹೊಸ ರೂಪಾಂತರಿ ಎಷ್ಟು ಅಪಾಯಕಾರಿ ಎಂಬ ಬಗ್ಗೆ ತತ್ಕ್ಷಣಕ್ಕೆ ಏನನ್ನೂ ಹೇಳಲಾಗದು. ಅದಕ್ಕೆ ಇನ್ನೂ ಕೆಲವು ವಾರಗಳು ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ದೇಶದಲ್ಲಿ ಗುರುವಾರದಿಂದ ಶುಕ್ರವಾರದ ನಡುವೆ ಆರೋಗ್ಯ ಇಲಾಖೆ ಮಾಹಿತಿಯಂತೆ 10,549 ಹೊಸ ಕೇಸ್ಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 488 ಮಂದಿ ಅಸುನೀಗಿದ್ದಾರೆ.