ನವದೆಹಲಿ, ನ.26 (DaijiworldNews/HR): ಅಂತರರಾಷ್ಟ್ರೀಯ ವಿಮಾನಗಳ ಸೇವೆ 21 ತಿಂಗಳ ಬಳಿಕ ದೇಶದಲ್ಲಿ ಆರಂಭವಾಗುತ್ತಿದ್ದು, ಡಿಸೆಂಬರ್ 15ರಿಂದ ನಿಗದಿತ ವಿಮಾನಗಳ ಹಾರಾಟ ನಡೆಯಲಿದೆ ಎಂದು ನಾಗರಿಕ ವಿಮಾನಗಳ ಸಚಿವಾಲಯ ತಿಳಿಸಿದೆ.
ಕಳೆದ ವರ್ಷ ಮಾರ್ಚ್ 23ರಿಂದ ಕೊರೊನಾ ಹಿನ್ನಲೆಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸೇವೆಗಳನ್ನು ನಿಷೇಧಿಸಲಾಗಿತ್ತು. ಕಳೆದ ವರ್ಷ ಜುಲೈನಿಂದ ಸುಮಾರು 28 ರಾಷ್ಟ್ರಗಳೊಂದಿಗೆ ಏರ್ ಬಬಲ್ ವ್ಯವಸ್ಥೆಯೊಂದಿಗೆ ವಿಶೇಷ ಪ್ರಯಾಣಿಕ ವಿಮಾನಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇನ್ನು ಭಾರತದಿಂದ ಪ್ರಯಾಣಿಸುವ ಮತ್ತು ವಿದೇಶದಿಂದ ಇಲ್ಲಿಗೆ ಬರುವ ಅಂತರರಾಷ್ಟ್ರೀಯ ನಾಗರಿಕ ವಿಮಾನ ಸೇವೆಗಳನ್ನು ಪುನರಾರಂಭಿಸುವ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳನ್ನು ಸಂಪರ್ಕಿಸಿ ಪರಿಶೀಲನೆಗೆ ಒಳಪಡಿಸಲಾಗಿದೆ.