ಬೆಂಗಳೂರು, ನ.26 (DaijiworldNews/PY): ರಾಜ್ಯ ಸರ್ಕಾರದ ವಿರುದ್ದ ಮತ್ತೆ ಕಿಡಿಕಾರಿರುವ ರಾಜ್ಯ ಕಾಂಗ್ರೆಸ್, "ಬಿಜೆಪಿ ಸರ್ಕಾರ ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಬಿಜೆಪಿ ಆಡಳಿತದಲ್ಲಿ ಮಕ್ಕಳ ಭವಿಷ್ಯ ಕಮರಿದೆ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "40% ಕಮಿಷನ್ ದಂಧೆಯ ಬಿಜೆಪಿ ಸರ್ಕಾರ ಮಕ್ಕಳ ವಿಷಯದಲ್ಲೂ ಮೋಸ ಮಾಡುತ್ತಿದೆ. ಮೊಟ್ಟೆಯಲ್ಲೂ ಮೋಸ, ಸ್ವೆಟರ್ನಲ್ಲೂ ಮೋಸ, ಬಿಸಿಯೂಟದಲ್ಲೂ ಮೋಸ, ಕ್ಷೀರಭಾಗ್ಯದಲ್ಲೂ ಮೋಸ, ಪಠ್ಯಪುಸ್ತಕದಲ್ಲೂ ಮೋಸ, ಸಮವಸ್ತ್ರದಲ್ಲೂ ಮೋಸ. ಶಾಲೆ ಶುರುವಾಗಿ ಹಲವು ದಿನಗಳು ಕಳೆದರೂ ಸಮವಸ್ತ್ರ ನೀಡದ ಅಸಮರ್ಥ ಸರ್ಕಾರದಿಂದ ಮಕ್ಕಳ ಭವಿಷ್ಯಕ್ಕೆ ಭರವಸೆ ಇಲ್ಲದಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
"ಮಕ್ಕಳಿಗೆ ಮೋಸ. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯಲ್ಲಿ ತಾರತಮ್ಯ. ಶೈಕ್ಷಣಿಕ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ ಬಿಜೆಪಿ ಸರ್ಕಾರ. ಬಿಸಿಯೂಟದಲ್ಲೂ ಸಮಸ್ಯೆ, ಸಮವಸ್ತ್ರದಲ್ಲೂ ತಾರತಮ್ಯ. ಬಿಜೆಪಿ ಆಡಳಿತದಲ್ಲಿ ಮಕ್ಕಳ ಭವಿಷ್ಯ ಕಮರಿದೆ" ಎಂದು ಟೀಕಿಸಿದೆ.
"ಕೋವಿಡ್ ಸಂದರ್ಭದಲ್ಲಿ ತೋರಿದ ಬೇಜವಾಬ್ದಾರಿತನವನ್ನೇ ಇಂದಿಗೂ ಮುಂದುವರೆಸಿದ್ದಾರೆ ಆರೋಗ್ಯ ಸಚಿವ ಸುಧಾಕರ್. ರಾಜ್ಯದಲ್ಲಿ ಹಲವು ದಿನಗಳಿಂದ ಡೆಸ್ಫಾರಲ್ ಔಷಧದ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದರೂ ಸಚಿವರು ಕೊರತೆ ನೀಗಿಸುವ ಕ್ರಮ ಕೈಗೊಂಡಿಲ್ಲ. ಕಂಡವರ ಪತ್ನಿಯರ ಲೆಕ್ಕ ಹಾಕುವುದರಲ್ಲಿರುವ ಆಸಕ್ತಿ ತಮ್ಮ ಕೆಲಸಗಳಲ್ಲಿ ಇಲ್ಲದಿರುವುದೇಕೆ?" ಎಂದು ಪ್ರಶ್ನಿಸಿದೆ.