ಜೈಪುರ, ನ.26 (DaijiworldNews/PY): "ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾಗಲಿದೆ" ಎಂದು ಕೇಂದ್ರ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಖಾತೆ ಸಚಿವ ನಾರಾಯಣ ರಾಣೆ ತಿಳಿಸಿದ್ದಾರೆ.
ಜೈಪುರದಲ್ಲಿ ಮಾತನಾಡಿದ ಅವರು, "ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಬದಲಾವಣೆಯನ್ನು ಕಾಣಲಿದ್ದೀರಿ. ಈ ಬದಲಾವಣೆ ಮಾರ್ಚ್ ತಿಂಗಳಿನಲ್ಲಿ ಕಾಣಲಿದೆ. ಸರ್ಕಾರವನ್ನು ರಚಿಸುವುದು ಹಾಗೂ ಸರ್ಕಾರವನ್ನು ಪತನಗೊಳಿಸುವುದು, ಕೆಲವೊಂದು ವಿಚಾರಗಳನ್ನು ರಹಸ್ಯವಾಗಿಯೇ ಇಡಬೇಕು" ಎಂದಿದ್ದಾರೆ.
"ಉದ್ಧವ್ ಠಾಕ್ರೆಗೆ ಅನಾರೋಗ್ಯವಿದೆ. ಹಾಗಾಗಿ ಅವರೊಡನೆ ಮಾತನಾಡಬೇಡಿ ಎಂದು ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಜಾಸ್ತಿ ದಿನ ಉಳಿಯುವುದಿಲ್ಲ" ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ ಮೈತ್ರಿ ಮಾಡಿಕೊಂಡಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಎರಡು ವಾರಗಳ ಹಿಂದೆಯಷ್ಟೇ ಮುಂಬೈನ ಹೆಚ್ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಯಶಸ್ವಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.