ಬೆಂಗಳೂರು, ನ.26 (DaijiworldNews/PY): "ಶುಕ್ರವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬೆಂಗಳೂರಿನ ಹಲವು ಕಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ, ಭೂಕಂಪನ ಆಗಿರುವ ಬಗ್ಗೆ ರಿಕ್ಟರ್ ಮಾಪಕದಲ್ಲಿ ಈವರೆಗೆ ಯಾವುದೇ ವರದಿಯಾಗಿಲ್ಲ" ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ಹೇಳಿವೆ.
ಬೆಂಗಳೂರಿನ ಕಗ್ಗಲಿಪುರ, ಜ್ಞಾನಭಾರತಿ, ಹೆಮ್ಮಿಗೆಪುರ, ಆರ್ ಆರ್ ನಗರ, ಕೆಂಗೇರಿ ಸೇರಿದಂತೆ ನಾನಾ ಕಡೆ ಭೂಮಿ ಕಂಪಿಸಿರುವ ಬಗ್ಗೆ ವರದಿಯಾಗಿದೆ. ನಿಗೂಢ ರೀತಿಯಲ್ಲಿ ಬಾಂಬ್ ಸೋಟಿಸಿದಂತೆ ಶಬ್ದ ಹೊರಹೊಮ್ಮಿ ಕೆಲವು ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿತು. ಮನೆಯಲ್ಲಿದ್ದ ಸಾಮಾನುಗಳು, ಪೀಠೋಪಕರಣಗಳು ಸೇರಿದಂತೆ ಮತ್ತಿತರ ಸಣ್ಣಪುಟ್ಟ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಆದರೆ ಈವರೆಗೂ ಎಲ್ಲಿಯೂ ಯಾರಿಗೂ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಖಚಿತಪಟ್ಟಿಲ್ಲ. ಬಹುತೇಕರು ಇದು ಭೂಕಂಪನದ ಅನುಭವ ಎಂದೇ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕೆಎಸ್ಎನ್ಡಿಎಂಸಿ ಸ್ಪಷ್ಟನೆ ನೀಡಿದ್ದು, "ಬೆಂಗಳೂರಿನಲ್ಲಿ ಭೂಕಂಪನ ಆಗಿಲ್ಲ" ಎಂದು ತಿಳಿಸಿದೆ.
"ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ ಮೊದಲಾದ ಕಡೆ 11.50ರಿಂದ 12.15ರವೆರೆಗೆ ಭೂಮಿ ಕಂಪಿಸಿದ ವರದಿಯನ್ನು ಆಧರಿಸಿ, ಮಾಪಕದಲ್ಲಿ ಮಾಹಿತಿ ಇದೆಯೇ ಎನ್ನುವ ಬಗ್ಗೆ ಪರಿಶೀಲಿಸಲಾಯಿತು. ಆದರೆ, ಯಾವುದೇ ಕಂಪನದ ಅಲೆಗಳು ದಾಖಲಾಗಿಲ್ಲ" ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
"ಬೆಳಗ್ಗೆ 11.50ರಿಂದ ಮಧ್ಯಾಹ್ನ 12.15ರ ಅವಧಿಯಲ್ಲಿ ಭೂಕಂಪನದ ಸಂಕೇತಗಳು ಹೊಮ್ಮಿವೆಯೇ ಎಂದು ವಿಶ್ಲೇಷಕರು ಪರಿಶೀಲಿಸಿದ್ದಾರೆ. ಆದರೆ, ಅಂತಹ ಯಾವುಉದೇ ಸಂಕೇತಗಳು ಕಂಡುಬಂದಿಲ್ಲ" ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್, "ಭೂಕಂಪದ ಬಗ್ಗೆ ಇಲಾಖೆಯಿಂದ ಯಾವುದೇ ಮಾಹಿತಿ ಇಲ್ಲ. ಅಗತ್ಯವಿದ್ದಲ್ಲಿ ಇಲಾಖೆಯಿಂದ ಪರಿಶೀಲನೆ ಮಾಡಿಸುತ್ತೇವೆ" ಎಂದು ತಿಳಿಸಿದ್ದಾರೆ.