ಆಂಧ್ರಪ್ರದೇಶ, ನ.26 (DaijiworldNews/PY): ಶಾಲೆ ಎಂದಮೇಲೆ ಅಲ್ಲಿ ಪೆನ್ಸಿಲ್, ಪೆನ್ನು ವಿಚಾರಕ್ಕಾಗಿ ಜಗಳ ಆಗೋದು ಸಾಮಾನ್ಯ. ಆದರೆ, ಇಲ್ಲೊಬ್ಬ ಪ್ರಾಥಮಿಕ ಶಾಲಾ ಬಾಲಕ ಸಹಪಾಠಿ ಪೆನ್ಸಿಲ್ ಕದ್ದ ಕಾರಣ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಬಾಲಕರ ಗುಂಪೊಂದು ಪೊಲೀಸ್ ಠಾಣೆಗೆ ಆಗಮಿಸಿ ಸಹಪಾಠಿಯ ವಿರುದ್ದ ದೂರು ದಾಖಲಿಸುವಂತೆ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಕ ಪೆಡಕಡುಬುರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಪೆನ್ಸಿಲ್ ಸಮಸ್ಯೆಯನ್ನು ಬಗೆಹರಿಸುವಂತೆ ಪೊಲೀಸರ ಬಳಿ ಹೇಳಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ವಿಡಿಯೋವನ್ನು ಆಂಧ್ರಪ್ರದೇಶ ಪೊಲೀಸ್ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಾಥಮಿಕ ಶಾಲೆಯ ಮಕ್ಕಳು ಸಹ ಆಂಧ್ರಪ್ರದೇಶ ಪೊಲೀಸರ ಮೇಲೆ ನಂಬಿಕೆ ಇಟ್ಟಿದ್ದಾರೆ. ಆಂಧ್ರಪ್ರದೇಶದ ಪೊಲೀಸರು ಜನರಿಗೆ ವಿಶ್ವಾಸ ಹಾಗೂ ಭರವಸೆ ಹುಟ್ಟುಸುವಂತಹ ಸೇವೆಯನ್ನು ನೀಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ತನ್ನ ಸಹಪಾಠಿ ಪೆನ್ಸಿಲ್ ವಾಪಸ್ಸು ಕೊಡುತ್ತೇನೆ ಎಂದು ಹೇಳಿ ವಾಪಾಸ್ಸು ನೀಡಲಿಲ್ಲ ಎಂದ ಬಾಲಕ ಹೇಳಿದ್ದಾನೆ. ಇದಕ್ಕೆ ನಾವೇನು ಮಾಡೋದು ಎಂದು ಪೊಲೀಸರು ಕೇಳಿದ್ದಕ್ಕೆ ಬಾಲಕ ನನ್ನ ಸಹಪಾಠಿಯ ವಿರುದ್ದ ದೂರು ದಾಖಲಿಸಿಕೊಳ್ಳಿ ಎಂದಿದ್ದಾನೆ. ಕೊನೆಗೆ ಇಬ್ಬರು ಮಕ್ಕಳು ರಾಜಿ ಮಾಡಿಕೊಂಡಿದ್ಧಾರೆ.