ಬೆಂಗಳೂರು, ನ.26 (DaijiworldNews/PY): "ದೇಶದ ಭದ್ರತೆಗೆ ಅಕ್ರಮ ವಲಸಿಗರು ಅಪಾಯಕಾರಿ. ಹಾಗಾಗಿ ಸರ್ಕಾರ ಅಕ್ರಮ ವಲಸಿಗರ ಬಗ್ಗೆ ಎಚ್ಚರಿಕೆ ವಹಿಸಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, "ಇಂದು ಸಿಸಿಬಿ ಪೊಲೀಸರು ಐದು ಮಂದಿ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದಿದ್ಧಾರೆ. ಪೊಲೀಸ್ ಠಾಣೆಗಳಿಗೆ ಕ್ರಮ ವಲಸಿಗರ ಪಟ್ಟು ಮಾಡಲು ನಿರ್ದೇಶನ ನೀಡಲಾಗಿದೆ. ಅಕ್ರಮ ವಲಸಿಗರ ಪಟ್ಟಿ ಮಾಡಿ ಅವರನ್ನು ಡಿಟೆಂಷನ್ ಸೆಂಟರ್ಗೆ ತಂದು ಹಾಕಲು ಸೂಚಿಸಲಾಗಿದೆ" ಎಂದಿದ್ದಾರೆ.
"ಅಸ್ಸಾಂ ಭಾಗದಲ್ಲಿ ಅಸ್ಸಾಂ ವಲಸಿಗರಿಗೆ ದಾಖಲೆ ನೀಡುವ ಜಾಲವೇ ಇದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಹಾಗೂ ಆಯಾ ರಾಜ್ಯಕ್ಕೆ ಮಾಹಿತಿ ನೀಡಿದ್ಧೇವೆ" ಎಂದು ಹೇಳಿದ್ದಾರೆ.
"ಅಕ್ರಮ ವಲಸಿಗರು ಹೇಗೆ ಬರುತ್ತಾರೆ. ಅವರನ್ನು ಯಾರು ಕರೆದುಕೊಂಡು ಬರುತ್ತಾರೆ ಎನ್ನುವ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಕಾಫಿ ಎಸ್ಟೇಟ್ ಕೆಲಸ, ಕಟ್ಟಡ ಕೆಲಸಕ್ಕಾಗಿ ಅಕ್ರಮ ವಲಸಿಗರು ಬಂದಿದ್ದಾರೆ. ಅಕ್ರಮ ವಲಸಿಗರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಕೆಲಸ ಆಗಲಿದೆ" ಎಂದು ತಿಳಿಸಿದ್ದಾರೆ.