ಮುಂಬೈ, ನ.26 (DaijiworldNews/HR): 13 ವರ್ಷಗಳ ಹಿಂದೆ ನಡೆದ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್ನಿಂದ ವಶಕ್ಕೆ ಪಡೆಯಲಾಗಿದ್ದ ಮೊಬೈಲ್ ಫೋನ್ ಅನ್ನು ಮುಂಬೈ ಪೊಲೀಸ್ನ ಮಾಜಿ ಆಯುಕ್ತ ಪರಂ ಬೀರ್ ಸಿಂಗ್ ನಾಶ ಮಾಡಿದ್ದರೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾಯಾನಗರಿಯ ಪೊಲೀಸ್ ಆಯುಕ್ತರಿಗೆ ಈ ಕುರಿತು ಲಿಖಿತ ದೂರು ನೀಡಿರುವ ನಿವೃತ್ತ ಎಸಿಪಿ ಶಂಶೇರ್ ಖಾನ್ ಪಠಾಣ್, "ಈ ಪ್ರಕರಣದ ತನಿಖೆ ನಡೆಸಿ, ಪರಂ ಬೀರ್ ಸಿಂಗ್ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲು" ಎಂದು ಮನವಿ ಮಾಡಿಕೊಂಡಿದ್ದಾರೆ.
26/11ರ ದಾಳಿ ಸಂದರ್ಭ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಹಿರಿಯ ನಿರೀಕ್ಷಕರಾಗಿದ್ದ ಎನ್.ಆರ್. ಮಾಲಿ ಅವರು ಕಸಬ್ನಿಂದ ವಶಪಡಿಸಿಕೊಂಡ ಮೊಬೈಲ್ ಅನ್ನು ಪೇದೆಯೊಬ್ಬರಿಗೆ ಕೊಟ್ಟಿರುವುದಾಗಿ ತಿಳಿಸಿದ್ದರು ಎಂದು ದೂರಿನಲ್ಲಿ ಪಠಾಣ್ ತಿಳಿಸಿದ್ದಾರೆ.
ಇನ್ನು ಆ ಸಮಯದಲ್ಲಿ ಭಯೋತ್ಪಾದಕ ನಿಗ್ರಹ ದಳದ ಡಿಐಜಿ ಆಗಿದ್ದ ಸಿಂಗ್, ಪೇದೆಯಿಂದ ಮೊಬೈಲ್ ಪಡೆದುಕೊಂಡಿದ್ದು, ಭಯೋತ್ಪಾದಕ ದಾಳಿಯ ತನಿಖಾಧಿಕಾರಿ ರಮೇಶ್ ಮಾಳೆಗೆ ಹಸ್ತಾಂತರಿಸುವ ಬದಲಿಗೆ ಸಾಕ್ಷಿಯನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದ್ದು, ಈ ದೂರಿನ ಬಗ್ಗೆ ಸಿಂಗ್ರಿಂದ ಯಾವುದೇ ಪ್ರತಿಕ್ರಿಯೆ ಕೇಳಿ ಬಂದಿಲ್ಲ.