ದಾವಣಗೆರೆ, ನ.26 (DaijiworldNews/PY): "ರಾಜ್ಯಪಾಲರಿಗೆ ಕೈ ನಾಯಕರು ನೀಡಿರುವ ದೂರು ಹಾಸ್ಯಾಸ್ಪದ ಮನವಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ಧಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಕೊಟ್ಟಿರುವ ಪತ್ರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಯಾವ ಕಾಲದಲ್ಲಿಆಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿನ ಟೆಂಡರ್ಗಳನ್ನು ತನಿಖೆ ಮಾಡಿಸುತ್ತೇವೆ. ಗುತ್ತಿಗೆದಾರರಿಗೆ ಯಾವ ಅವಧಿಯಲ್ಲಿ ಅನುಭವ ಆಗಿದೆ ಎನ್ನುವುದು ಪತ್ರದಲ್ಲಿ ಬರೆದಿಲ್ಲ" ಎಂದಿದ್ದಾರೆ.
"ಪರ್ಸೆಂಟೇಜ್ ಜನರು ಕಾಂಗ್ರೆಸ್ಸಿಗರೇ. ಕಾಮಗಾರಿ ಟೆಂಡರ್ಗಳಲ್ಲಿ ಪರ್ಸೆಂಟ್ ಜಾಸ್ತಿಯಾಗಿದ್ದರೆ ಅದು ಕಾಂಗ್ರೆಸ್ ಕಾಲದಲ್ಲಿ. ಪರ್ಸೆಂಟೇಜ್ ಕುರಿತು ಮಾತನಾಡಿದ ವಿಡಿಯೋ ಪ್ರಚಾರ ಆಗಿದ್ದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಅಧಿಕಾರವಧಿಯ ವೇಳೆ ಪರ್ಸೆಂಟ್ ಜಾಸ್ತಿಯಾಗಿದ್ದು" ಎಂದು ಆರೋಪಿಸಿದ್ದಾರೆ.
ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಎಸಿಬಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದು, ಇದರಿಂದ ಭ್ರಷ್ಟರ ಬಂಡವಾಳ ಬಯಲಾಗಿದೆ. ವ್ಯವಸ್ಥೆ ಶುದ್ಧೀಕರಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಂಡಿದ್ದೇವೆ. ಈ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ" ಎಂದಿದ್ದಾರೆ.
ಮಳೆ ಹಾನಿ ಬಗ್ಗೆ ಪ್ರತಿಕ್ರಿಯಿಸಿದ ಅವರು, "ರಾಜ್ಯದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಸಾಕಷ್ಟು ಹಾನಿಯಾಗಿದೆ. ಹಾನಿಯ ಮಾಹಿತಿಯ ಬಗ್ಗೆ ಪರಿಹಾರ ಆಪ್ಗೆ ಅಪ್ಲೋಡ್ ಆಗುತ್ತಿದ್ದಂತೆ ಸಂಬಂಧಿತ ರೈತರಿಗೆ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಲಾಗಿದ್ದು, ಮಳೆಯಿಂದ ನಷ್ಟಕ್ಕೀಡಾಗಿರುವ ಪ್ರತಿಯೋರ್ವ ರೈತರಿಗೆ ಪರಿಹಾರ ನೀಡಲಾಗುವುದು" ಎಂದು ಹೇಳಿದ್ದಾರೆ.