ಬೆಂಗಳೂರು,ನ 26 (DaijiworldNews/MS): ಸರ್ಕಾರದ ವಿರುದ್ದ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿದ್ದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯಪಾಲರಿಗೆ ಕಾಂಗ್ರೆಸ್ ಪಕ್ಷವು ಮನವಿ ಸಲ್ಲಿಸಿದ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಆಡಳಿತ ಪಕ್ಷ ಬಿಜೆಪಿ ವಿಪಕ್ಷದ ವಿರುದ್ದ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿಯ ರಾಜ್ಯ ಘಟಕ, " ಕಾಂಗ್ರೆಸ್ಸಿಗರೇ, ನಿಮ್ಮ ಅಧಿಕಾರಾವಧಿಯಲ್ಲಿ ಸರ್ಕಾರವನ್ನು ವಜಾಮಾಡಲು ಸಾಕಷ್ಟು ಕಾರಣಗಳಿದ್ದವು, ನೆನಪಿಸಿಕೊಳ್ಳುವಿರಾ? ಎಂದು ಲೇವಡಿ ಮಾಡಿದೆ.
" ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯವದು. ಅವರ ಬೆಂಬಲಿಗರು ನೈತಿಕತೆಯ ಹುಸಿ ಪಾಠ ಮಾಡುತ್ತ ಖಜಾನೆಯನ್ನು ಖಾಲಿ ಮಾಡುತ್ತಿದ್ದ ಭ್ರಷ್ಟಾಚಾರದ ಉಚ್ಛ್ರಾಯ ಕಾಲ ಆಗ ಬಹಿರಂಗಗೊಂಡಿದ್ದೇ ಕಾಂಗ್ರೆಸ್ ಎಂಎಲ್ಸಿ ಗೋವಿಂದರಾಜು ಅವರ ಡೈರಿ. ಕಾಂಗ್ರೆಸಿಗರೇ, ಈ ಪ್ರಕರಣವನ್ನು ಒಮ್ಮೆ ನೆನಪಿಸಿಕೊಳ್ಳಿ" ಎಂದು ಬಿಜೆಪಿ ಲೇವಡಿ ಮಾಡಿದೆ.
"ಗೋವಿಂದರಾಜು ಅವರ ಐಟಿ ದಾಳಿಯಲ್ಲಿ ಸಿದ್ದರಾಮಯ್ಯನವರ ಪರವಾಗಿ ಗೋವಿಂದರಾಜು ಕಾಂಗ್ರೆಸ್ ಹೈಕಮಾಂಡ್ಗೆ ಸಲ್ಲಿಸಿದ ಕಪ್ಪ ಕಾಣಿಕೆಯ ವಿವರವಿತ್ತು.ಕಾಂಗ್ರೆಸ್ ಹೈಕಮಾಂಡ್, ಎಪಿ, ಆರ್.ಜಿ, ಎಸ್.ಜಿ ಮೊದಲಾದ ಸಂಕೇತಾಕ್ಷರಗಳಿದ್ದವು. ಸಿದ್ದರಾಮಯ್ಯನವರೇ, ಇವು ಯಾರ ಹೆಸರನ್ನು ಸೂಚಿಸುತ್ತಿದ್ದವು ಎಂಬುದು ಸ್ವಲ್ಪ ವಿವರಿಸಿ.
ಡಿಕೆಶಿ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ಅವರೊಂದಷ್ಟು ಕಾಗದಗಳನ್ನು ಹರಿದು ಹಾಕಿದ್ದರು.ಹಠ ಬಿಡದ ಐಟಿ ಅಧಿಕಾರಿಗಳು ಆ ಚೀಟಿಗಳನ್ನು ಜೋಡಿಸಿದಾಗಲೂ ಎಐಸಿಸಿ, ಎಪಿ, ಆರ್ಜಿ, ಎಸ್ಜಿ ಎಂಬ ಉಲ್ಲೇಖಗಳಿತ್ತು.ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆದಾಗಲೆಲ್ಲ ಇದೇ ಕೆಲವು ರಹಸ್ಯಾಕ್ಷರಗಳು ಹೊರಬರುತ್ತವೆ. ಯಾರಿವರು?" ಎಂದು ಪ್ರಶ್ನಿಸಿದೆ.
"ಪುರಾವೆಗಳೇ ಇಲ್ಲದ ಪತ್ರವನ್ನಿಟ್ಟುಕೊಂಡು ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಕಾಂಗ್ರೆಸ್ ರಾಜ್ಯಪಾಲರನ್ನು ಆಗ್ರಹಿಸಿದೆ.್ಆಧಾರ ರಹಿತ ಪತ್ರದ ಆಧಾರದಲ್ಲಿ ಸರ್ಕಾರ ವಜಾಗೊಳಿಸಲು ಒತ್ತಾಯಿಸುವುದಾದರೆ, ಐಟಿ ದಾಳಿಯಲ್ಲಿ ಲಭಿಸಿದ ಅಧಿಕೃತ ದಾಖಲೆಗಳ ಪ್ರಕಾರ ಕಾಂಗ್ರೆಸ್ ಸರ್ಕಾರವನ್ನೂ ಅಂದು ವಜಾಗೊಳಿಸಬೇಕಿತ್ತಲ್ಲವೇ? ನನ್ನ ಆತ್ಮಹತ್ಯೆಗೆ ಕೆ.ಜೆ. ಜಾರ್ಜ್ ಕಾರಣ ಎಂದು ಡಿವೈಎಸ್ಪಿ ಗಣಪತಿ ನೇರ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಕಾಂಗ್ರೆಸ್ ಅವರಿಗೆ ಮಾನಸಿಕ ರೋಗಿ ಎಂಬ ಪಟ್ಟಕಟ್ಟಿತು. ಕಾಂಗ್ರೆಸ್ಸಿಗರೇ, ನಿಮ್ಮ ಅಧಿಕಾರಾವಧಿಯಲ್ಲಿ ಸರ್ಕಾರವನ್ನು ವಜಾಮಾಡಲು ಸಾಕಷ್ಟು ಕಾರಣಗಳಿದ್ದವು, ನೆನಪಿಸಿಕೊಳ್ಳುವಿರಾ? "ಎಂದು ಹೇಳಿದೆ.