ನವದೆಹಲಿ, ನ.26 (DaijiworldNews/PY): "ಹಲವು ತಲೆಮಾರುಗಳಿಂದ ಒಂದು ಕುಟುಂಬವು ಪಕ್ಷವನ್ನು ಮುನ್ನಡೆಸಿದರೆ ಅದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ಧಾರೆ.
ಸಂವಿಧಾನದ ದಿನವಾದ ಇಂದು ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, "ಕುಟುಂಬ ಒಳಿತಿನ ನಿಟ್ಟಿನಲ್ಲಿ ಕುಟುಂಬದಿಂದಲೇ ಒಂದು ಪಕ್ಷ ನಡೆಯುತ್ತಿದೆ. ಈ ಬಗ್ಗೆ ನಾನು ಹೆಚ್ಚು ಹೇಳಬೇಕೆ?. ಒಂದು ಪಕ್ಷವನ್ನು ಒಂದು ಕುಟುಂಬವೇ ನಡೆಸಿ ಹಾಗೂ ಇಡೀ ಪಕ್ಷದ ವ್ಯವಸ್ಥೆ ಕೂಡಾ ಅದೇ ಕುಟುಂಬಕ್ಕೆ ಸೀಮಿತವಾಗಿದ್ದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಅದು ಉತ್ತಮವಲ್ಲ" ಎಂದು ಕಾಂಗ್ರೆಸ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
"ಈ ರೀತಿಯಾದ ಪಕ್ಷಗಳು ಪ್ರಜಾಸತ್ತಾತ್ಮಕ ಗುಣವನ್ನೇ ಕಳೆದುಕೊಂಡಿದ್ದು, ಈ ಪಕ್ಷಗಳು ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೇಗೆ ಸಾಧ್ಯ?. ಒಂದೇ ಕುಟುಂಬದಿಂದ ಜನರು ರಾಜಕೀಯಕ್ಕೆ ಬರಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ, ಪೀಳಿಗೆಯಿಂದ ಪೀಳಿಗೆಗೆ ಒಂದೇ ಕುಟುಂಬವು ಪಕ್ಷವನ್ನು ಮುನ್ನಡೆಸುತ್ತಿದ್ದರೆ, ಪ್ರಜಾಪ್ರಭುತ್ವದ ದೃಷ್ಟಿಯಿಂದ ಅದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.
"ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ರಾಜವಂಶದ ರಾಜಕೀಯ ಪಕ್ಷಗಳನ್ನು ಒಮ್ಮೆ ಅವಲೋಕಿಸಿ, ಪ್ರಜಾಪ್ರಭುತ್ವದ ಉದ್ಧೇಶಕ್ಕೆ ಇದು ವಿರುದ್ದವಾಗಿದೆ. ಸಂವಿಧಾನದ ಮೇಲೆ ನಂಬಿಕೆ ಇರುವವರಿಗೆ ಇದು ವಿರುದ್ದವಾಗಿದೆ" ಎಂದು ಹೇಳಿದ್ದಾರೆ.