ಬೆಂಗಳೂರು, ನ 26 (DaijiworldNews/MS): ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣ ವಿಚಾರವಾಗಿ ಸಚಿವ ಡಾ.ಕೆ.ಸುಧಾಕರ್ ಮತ್ತು ಸಚಿವರ ಮಧ್ಯೆ ಜಟಾಪಟಿ ನಡೆದಿದೆ. ಆರೋಗ್ಯ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ನಿರ್ಮಾಣ ಸಂಬಂಧ ಇತರ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಕೊನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರಸ್ತಾವನೆಯನ್ನೇ ಕೈ ಬಿಟ್ಟು ಮುಂದಕ್ಕೆ ಹಾಕಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಬಳಿ ನೂತನವಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಿಸುವ ಕಾಮಗಾರಿಗಳ 27 ಕೋಟಿ ರೂ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಮಾಡಲಾಯಿತು ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.
ಸಂಪುಟ ಸಭೆಯಲ್ಲಿ ಸಚಿವ ನಾರಾಯಣ ಗೌಡ ಮಾತನಾಡಿ , ನಮಗೂ ಹೊಸ ಆಸ್ಪತ್ರೆ ಕಟ್ಟಡ ಹಂಚಿಕೆ ಮಾಡಿ ಈ ಬಗ್ಗೆ ಹಿಂದಿನ ಸಿಎಂ ಯಡಿಯೂರಪ್ಪ ಕೆ.ಆರ್.ಪೇಟೆಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಇನ್ನೂ ಕೂಡಾ ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದರೆ, ಚಿಕ್ಕಬಳ್ಳಾಪುರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದಕ್ಕೆ ಇತರ ಸಚಿವರೂ ದನಿಗೂಡಿಸಿದರು.ಸಚಿವ ನಾರಾಯಣಗೌಡ, ಅಶ್ವತ್ಥನಾರಾಯಣ, ಎಂಟಿಬಿ ಸೇರಿ ಏಳಕ್ಕೂ ಹೆಚ್ಚು ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲಾ ಅವರೇ ತೆಗೆದುಕೊಂಡು ಹೋದರೆ ನಾವೇನ್ ಮಾಡಬೇಕು ಎಂದು ಪ್ರಶ್ನಿಸಿದರು . ಸಂಪುಟ ಸಹೋದ್ಯೋಗಿಗಳ ಮಾತಿಂದ ಸಚಿವ ಸುಧಾಕರ್ ಮುಜುಗರಕ್ಕೆ ಒಳಗಾದರು. ಸಚಿವರ ವಿರೋಧ ಹೆಚ್ಚಾಗುತ್ತಿದ್ದ ಹಾಗೇ ಕೊನೆಗೆ ಸಿಎಂ ಪ್ರಸ್ತಾವನೆ ಕೈ ಬಿಟ್ಟರು.