ಪಣಜಿ, ನ.26 (DaijiworldNews/PY): "ಮಾಜಿ ಸಿಎಂ ದಿ. ಮನೋಹರ್ ಪರೀಕರ್ ಅವರು ಗೋಲ್ಡನ್ ಗೋವಾ ಸ್ಥಾಪಿಸಲು ಒಂದು ಕನಸು ಕಂಡಿದ್ದರು. ಅವರ ಕನಸನ್ನು ನನಸಾಗಿಸಲು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತನ್ನಿ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಗೋವಾದ ಬಿಚೋಲಿಯಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸಹಕಾರದೊಂದಿಗೆ ಸಿಎಂ ದಿ. ಮನೋಹರ್ ಪರೀಕರ್ ಅವರ ನೇತೃತ್ವದಲ್ಲಿ ಗೋವಾ ಸರ್ಕಾರ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಗೋವಾ ವಿಧಾನಸಭಾ ಚುನಾವಣೆಯ ಬಳಿಕ ಗೋವಾದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ" ಎಂದಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೊರೊನಾವು ದೇಶದ ಮೇಲೆ ವಿನಾಶವನ್ನುಂಟು ಮಾಡಿದೆ. ದೇಶದ ಜನರ ಸುರಕ್ಷತೆಯ ಸಲುವಾಗಿ ಅಂದು ಪ್ರಧಾನಿ ಮೋದಿಯವರು ಲಸಿಕೆ ಹಾಕಲು ತೀರ್ಮಾನಿಸಿದ್ದರು. ಲಸಿಕಾಕರಣ ಆರಂಭವಾದಾಗ ವಿಪಕ್ಷಗಳು ಕೈಸಾ ಲಗಾ ಮೋದಿಕಾ ಟೀಕಾ ಎಂದು ಟೀಕೆ ಮಾಡಿದ್ದವು. ಜನತೆ, ವಿಪಕ್ಷಗಳ ತಪ್ಪು ಕಲ್ಪನೆಗಳಿಗೆ ಬಲಿಯಾಗಕೂಡದು" ಎಂದು ಹೇಳಿದ್ದಾರೆ.