ನವದೆಹಲಿ, ನ.26 (DaijiworldNews/PY): ಕೊರೊನಾದ ಹೊಸ ರೂಪಾಂತರವನ್ನು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಪತ್ತೆಹಚ್ಚಿರುವುದಾಗಿ ಹೇಳಿದ ಬೆನ್ನಲ್ಲೇ ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಸಲಹೆ ಸೂಚನೆಗಳನ್ನು ನೀಡಿದೆ.
ಹಾಂಕಾಂಗ್, ದಕ್ಷಿಣ ಆಫ್ರಿಕಾ ಹಾಗೂ ಬೋಟ್ಸ್ವಾನಾಗಳಿಂದ ಬರುವ ಪ್ರಯಾಣಿಕರ ಪರೀಕ್ಷೆ ಹಾಗೂ ಸ್ಕ್ರೀನಿಂಗ್ ತೀವ್ರಗೊಳೀಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈ ಬಗ್ಗೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರದಿದ್ದು, ಕೊರೊನಾದ ಹೊಸ ರೂಪಾಂತರವು ಹಾಂಕಾಂಗ್, ದಕ್ಷಿಣ ಆಫ್ರಿಕಾ ಹಾಗೂ ಬೋಟ್ಸ್ವಾನಾದಲ್ಲಿ ವರದಿಯಾಗಿದೆ. ಕೊರೊನಾ ದೃಢಪಟ್ಟಿರುವ ಅಂತರಾಷ್ಟ್ರಿಯ ಪ್ರಯಾಣಿಕರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕೊರೊನಾದ ಹೊಸ ರೂಪಾಂತರವನ್ನು ಪತ್ತೆಹಚ್ಚಿರುವುದಾಗಿ ಗುರುವಾರ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ತಿಳಿಸಿದ್ದರು. ಈ ಹೊಸ ರೂಪಾಂತರವನ್ನು ಬಿ.1.1.529 ಎಂದು ಕರೆಯಲಾಗಿದೆ.
ದಕ್ಷಿಣ ಆಫ್ರಿಕಾದಿಂದ ಹಾಂಗ್ಕಾಂಗ್ಗೆ ಪ್ರಯಾಣಿಸಿದ ವ್ಯಕ್ತಿಯಲ್ಲಿ ಈ ರೂಪಾಂತರ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 100 ಮಾದರಿಗಳಲ್ಲಿ ಬಿ.1.1.529 ದೃಢಪಟ್ಟಿದೆ ಎಂದು ಗುರುವಾರ ವರದಿಯಾಗಿತ್ತು.