ಬೆಂಗಳೂರು, ನ.25 (DaijiworldNews/HR): ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೊಂದು ಮಗ್ಗುಳಿಗೆ ಹೊರಳಿದ್ದು, ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿ ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ 8ನೇ ಎಸಿಎಂಎಂ ಕೋರ್ಟ್ ನೀಡಿದ್ದಂತ ಆದೇಶಕ್ಕೆ, ಇದೀಗ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಆದರ್ಶ್ ಅಯ್ಯರ್ ಎಂಬುವರು ಪೊಲೀಸರ ವಿರುದ್ಧ ಕರ್ತವ್ಯ ಲೋಪ ಎಸಗಿರೋ ಖಾಸಗಿ ದೂರು ಸಲ್ಲಿಸಿದ್ದರು.
ಇನ್ನು ಈ ದೂರಿನ ವಿಚಾರಣೆ ನಡೆಸಿದ್ದ 8ನೇ ಎಸಿಎಂಎಂ ಕೋರ್ಟ್, ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ಈ ಪ್ರಕರಣ ರದ್ದು ಕೋರಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಮೂವರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಸಂಬಂಧ ಇಂದು ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠಕ್ಕೆ ಎಸ್ ಪಿಪಿ ಪ್ರಸನ್ನ ಕುಮಾರ್ ಅವರು ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ. ಅಂತಿಮ ವರದಿ ಸಲ್ಲಿಸೋದಕ್ಕೆ ಅನುಮತಿ ಕೋರಲಾಗಿದೆ ಎಂದು ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಪೀಠವು ಕಮಲ್ ಪಂತ್, ಡಿಸಿಪಿ ಎಂ.ಎನ್.ಅನುಚೇತ್ ಹಾಗೂ ಇನ್ಸ್ ಪೆಕ್ಟರ್ ಮಾರುತಿ ವಿರುದ್ಧದ ವಿರುದ್ಧದ ತನಿಖೆಗೆ ಮಧ್ಯಂತರ ತಡೆ ನೀಡಿದೆ.