ವಿಜಯಪುರ, ನ 25 (DaijiworldNews/MS): ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
ದೇಶದ್ರೋಹಿ ಕೃತ್ಯಕ್ಕೆ ಸಮಾನವಾದ ಮತಾಂತರದ ಮೂಲಕ ಅಸ್ಪೃಶ್ಯ ದಲಿತರು ಮಾತ್ರವಲ್ಲ ಮೇಲ್ವರ್ಗದ ಬ್ರಾಹ್ಮಣ, ಲಿಂಗಾಯತ, ಕುರುಬ ಹೀಗೆ ಎಲ್ಲಾ ಸಮುದಾಯದವರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದು ಸರ್ಕಾರ ತ್ವರಿತವಾಗಿ ಮತಾಂತರ ಕಾಯ್ದೆ ಜಾರಿಯ ಬಳಿಕ ನೈಜ ಅನುಷ್ಠಾನ ಮಾಡಬೇಕು. ಸರ್ಕಾರ ಕಾನೂನು ಜಾರಿಗೆ ತರಲು ಎಲ್ಲರೂ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಬಂಜಾರಾ ಸಮುದಾಯ, ಬೀದರ್, ಕಲಬುರ್ಗಿ ಭಾಗದಲ್ಲಿ ಮಾದಿಗ ಸಮುದಾಯ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಾಹ್ಮಣರು ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ ಲಿಂಗಾಯತರನ್ನೂ ಮತಾಂತರ ಮಾಡಲಾಗಿದೆ. ಈ ಕುರಿತ ಕಾನೂನು ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಮತಾಂತರ ತಡೆ ಕಾಯ್ದೆ ಜಾರಿಗಾಗಿ ಮಠಾಧೀಶರು ಮಠಗಳನ್ನು ಬಿಟ್ಟು ಹೊರಗೆ ಬರಬೇಕಾಗಿದೆ ಎಂದು ಒತ್ತಾಯಿಸಿದರು.