ಕಲಬುರ್ಗಿ, ನ.25 (DaijiworldNews/PY): ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಶಾಂತಗೌಡ ಬಿರಾದರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಜೇವರ್ಗಿಯ ಪಿಡಬ್ಲ್ಯೂಡಿಯಲ್ಲಿ ಕಿರಿಯ ಇಂಜಿನಿಯರ್ ಆಗಿದ್ದ ಶಾಂತಗೌಡ ಬಿರಾದರ್ ಅವರ ನಿವಾಸ ಮೇಲೆ ನಿನ್ನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆಯಾಗಿತ್ತು. ಈ ಸಂಬಂಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು.
ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ 15 ಅಧಿಕಾರಿಗಳು 65ಕ್ಕೂ ಅಧಿಕ ಕಡೆ ದಾಳಿ ನಡೆಸಿ ಮಹತ್ವದ ದಾಖಲೆ, ಅಕ್ರಮ ಹಣ ಪತ್ತೆ ಮಾಡಿದ್ದರು. ಈ ದಾಳಿ ಸಂದರ್ಭ ಕಲಬುರ್ಗಿಯ ಪಿಡಬ್ಲ್ಯೂಡಿ ಜೆಇ ಶಾಂತಗೌಡ ಬಿರಾದರ್ ಮನೆಯ ಪೈಪ್ನಲ್ಲಿ ಕಂತೆ ಕಂತೆ ನೋಟ್ ಪತ್ತೆಯಾಗಿತ್ತು.
ಶಾಂತಗೌಡ ಬಿರಾದರ್ ಅವರ ಮನೆ ಮೇಲೆ ದಾಳಿ ನಡೆಸಿದ್ದ ಸಂದರ್ಭ ಕಲಬುರಗಿಯಲ್ಲಿ 2 ವಾಸದ ಮನೆಗಳು, ಬೆಂಗಳೂರು ನಗರದಲ್ಲಿ 1 ನಿವೇಶನ, 3 ವಿವಿಧ ಕಂಪನಿಯ ಕಾರುಗಳು, 1 ದ್ವಿಚಕ್ರ ವಾಹನ, 1 ಸ್ಕೂಲ್ ಬಸ್, 2 ಟ್ರಾಕ್ಟರ್ಗಳು, 54,50,000 ರೂ. ನಗದು, 100 ಗ್ರಾಂ ಚಿನ್ನಾಭರಣಗಳು, 36 ಎಕರೆ ಕೃಷಿ ಜಮೀನು, 15 ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ ಎಂದು ಎಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿತ್ತು.
ಶಾಂತಗೌಡರು ಪದೇ ಪದೇ ಟಾಯ್ಲೆಟ್ಗೆ ಹೋಗಿ ಬರೋದಾಗಿ ಬಾತ್ರೂಂಗೆ ಹೋಗುತ್ತಿದ್ದರೆ, ಅವರ ಪತ್ನಿ ಹಾಗೂ ಮಗ ಅದೇ ಬಾತ್ರೂಂನ ಹಿಂದೆ ಇದ್ದ ಪೈಪ್ ಬಳಿ ಸುತ್ತಾಡುತ್ತಿದ್ದರು. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಎಸಿಬಿ ಅಧಿಕಾರಿಗಳು ಟಾಯ್ಲೆಟ್ ಒಳಗೆ ಹೋಗಿ ಸೂಕ್ಷ್ಮವಾಗಿ ಪರಿಶೀಲಿಸಿದ ವೇಳೆ, ವಾಷಿಂಗ್ ಮಿಷಿನ್ ವೇಸ್ಟೇಜ್ ನೀರು ಹೊರ ಹೋಗಲು ಇದ್ದಂತ ಪೈಪ್ ಮೇಲೆ ಕಲ್ಲು ಇಟ್ಟಿರುವುದು ಗಮನಕ್ಕೆ ಬಂದಿದೆ. ಆ ಕಲ್ಲನ್ನು ಪಕ್ಕಕ್ಕೆ ಸರಿಸಿ ನೋಡಿದಾಗ ಅದರಡಿಯ ಪೈಪ್ನಲ್ಲಿ ಕಂತೆ ಕಂತೆ ನೋಟ್ ತುರುಕಿರುವುದು ತಿಳಿದುಬಂದಿದೆ. ನಂತರ ಪ್ಲಂಬರ್ ಅನ್ನು ಕರೆಸಿ ಪೈಪ್ ಕಟ್ ಮಾಡಿಸಿ ಹನ ಪತ್ತೆ ಹಚ್ಚಿದ್ದಾರೆ.
ಪ್ರಕರಣದ ಸಂಬಂಧ ಎಸಿಬಿ ಅಧಿಕಾರಿಗಳು ಶಾಂತಗೌಡ ಅವರನ್ನು ನಿನ್ನೆ ತಡರಾತ್ರಿಯೇ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈಗ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಾಂತಗೌಡ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.