ಬೆಂಗಳೂರು, ನ.25 (DaijiworldNews/PY): ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟೀಕಿಸಿದ್ದು, ಬಿಜೆಪಿ ಪ್ರಚಾರ ಆನೆಯಷ್ಟು, ಕೆಲಸ ಮಾತ್ರ ಇರುವೆಯಷ್ಟು!! ಎಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಿಎಂ ಅಬ್ಬರದೊಂದಿಗೆ ಘೋಷಿಸಿದ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಪ್ರತ್ಯೇಕ ಅರ್ಜಿ ಹಾಕುವ ವ್ಯವಸ್ಥೆಯೇ ಇಲ್ಲ, ಸಾಮಾನ್ಯ ವರ್ಗದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಹೀಗಾಗಿ ಇದುವರೆಗೂ ಕೇವಲ 16 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ದೊರಕಿದೆ! ಬೊಮ್ಮಾಯಿಯವರೇ, ಇಂತಹ ಖಾಲಿ ಡಬ್ಬ ಅಲ್ಲಾಡಿಸಿ ಹೆಚ್ಚು ಸದ್ದು ಮಾಡಿದಿರಲ್ಲವೇ!?" ಎಂದು ಪ್ರಶ್ನಿಸಿದೆ.
"ರೈತ ವಿದ್ಯಾನಿಧಿ ಎನ್ನುವುದು ಕೇವಲ ಪ್ರಚಾರದ ಘೋಷಣೆ ಮಾತ್ರ.ಸಿಎಂ ರೈತ ವಿದ್ಯಾನಿಧಿ ಇನ್ನು ಕಾಗದದ ಕುಸುಮ. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತೇವೆ ಎಂದಿದ್ದ ಸಿಎಂ ಪ್ರತ್ಯೇಕ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಇದುವರೆಗೂ ಕೇವಲ 16 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ದಕ್ಕಿದ ಯೋಜನೆ. ಬಿಜೆಪಿ ಪ್ರಚಾರ ಆನೆಯಷ್ಟು, ಕೆಲಸ ಮಾತ್ರ ಇರುವೆಯಷ್ಟು!!" ಎಂದು ಟೀಕಿಸಿದೆ.
"ಕೋವಿಡ್ ಸಮಯದಲ್ಲಿ ಯಾವ ರೈತರಿಗೂ ಪರಿಹಾರ ಕೊಡಲಿಲ್ಲ, ಬೆಳೆಗೆ ಮಾರುಕಟ್ಟೆಯನ್ನೂ ಕಲ್ಪಿಸದೆ ಬಿಜೆಪಿ ಸರ್ಕಾರ ರೈತರನ್ನು ನಡು ನೀರಿನಲ್ಲಿ ಕೈಬಿಟ್ಟಿತು. ಬಾಯಿ ಮಾತಿನಲ್ಲಿ ಘೋಷಿಸಿದ ಪರಿಹಾರ ಯಾವ ರೈತರ ಕೈಗೂ ಸೇರಲಿಲ್ಲ. ಮುಖ್ಯಮಂತ್ರಿಗಳು, ಕೋವಿಡ್ ವೇಳೆ ರೈತರಿಗೆ ಎಷ್ಟು ಪರಿಹಾರ ಕೊಡಲಾಗಿದೆ ಎಂಬ ಪಟ್ಟಿ ಬಿಡುಗಡೆ ಮಾಡಲಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದರು.
"ಸರ್ಕಾರ ವಿಮಾ ಕಂಪನಿಗಳೊಂದಿಗೆ ಶಾಮೀಲಾಗಿ, ಕಂಪನಿಗಳಿಗೆ ನೆರವಾಗುವಂತೆ ನಡೆದುಕೊಳ್ಳುತ್ತಿದೆ. ವಿಮೆ ಹಣ ಕಟ್ಟಿಸಿಕೊಳ್ಳಲು ತುರ್ತಾಗಿ ಸಭೆ ನಡೆಸುವ ಆಸಕ್ತಿಯನ್ನು ರೈತರಿಗೆ ಪರಿಹಾರ ಕೊಡಿಸುವುದರಲ್ಲಿ ತೋರಿಸುತ್ತಿಲ್ಲ. ಸರ್ಕಾರ ಕೂಡಲೇ ರೈತರ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಕೆಲಸ ಮಾಡಬೇಕು" ಎಂದಿದ್ದರು.