ಬೆಂಗಳೂರು, ನ.25 (DaijiworldNews/PY): "ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎನ್ಡಿಆರ್ಎಫ್ ನಿಧಿಯಡಿ ಎಕರೆಗೆ 10,000 ರೂಪಾಯಿಯಂತೆ ಪರಿಹಾರ ನೀಡಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎನ್ಡಿಆರ್ಎಫ್ ನಿಧಿಯಡಿ ಎಕರೆಗೆ 10000 ರೂಪಾಯಿಯಂತೆ ಪರಿಹಾರ ನೀಡಬೇಕು. ಈ ಪರಿಹಾರವು 30 ದಿನಗಳೊಳಗೆ ರೈತರ ಕೈ ಸೇರಬೇಕು. ಈ ಹಿಂದೆ ನೀಡಿದ ಪರಿಹಾರದ ಭರವಸೆಗಳು ಹುಸಿಯಾಗಿವೆ. ರೈತರು ಹುಸಿ ಭರವಸೆಗಳಿಗೆ ಮರುಳಾಗದೆ ತಕ್ಷಣ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು" ಎಂದು ತಿಳಿಸಿದ್ದಾರೆ.
"ರೈತ ಮಿತ್ರರಲ್ಲಿ ನನ್ನದೊಂದು ಮನವಿ. 2 ವರ್ಷಗಳಿಂದ ನಿಮಗಾದ ನಷ್ಟದ ಬಗ್ಗೆ ಸರ್ಕಾರ ಜಾಣ ಮೌನವಹಿಸಿದೆ. ಕೋವಿಡ್ ಪರಿಹಾರ ಕೂಡ ನೀಡದೆ ವಂಚಿಸಿದೆ. ಅಕಾಲಿಕ ಮಳೆಯಿಂದಾಗಿ ನಿಮಗಾಗಿರುವ ನಷ್ಟದ ಬಗ್ಗೆ ನನಗೆ ಅರಿವಿದೆ. ನೀವು ಬೆಳೆದಿರುವ ಬೆಳೆ ಮಳೆಯಿಂದ ಹಾನಿಗೊಳಗಾಗಿದ್ದರೆ ಫೋಟೊ ತೆಗೆದು ಪರಿಹಾರ ನೀಡುವಂತೆ ತಹಸಿಲ್ದಾರ್ಗೆ ಅರ್ಜಿ ಸಲ್ಲಿಸಿ" ಎಂದಿದ್ದಾರೆ.
"ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆ ಬಿಜೆಪಿ ಕೃಪಾ ಪೋಷಿತ ನಾಟಕ ಮಂಡಳಿಯ ಒಂದು ಪಾತ್ರಧಾರಿಯಷ್ಟೆ. ಈ ಯೋಜನೆಯಿಂದ ರಾಜ್ಯದ ಯಾವ ರೈತರಿಗೆ ವಿಮೆ ಹಣ ಸಿಕ್ಕಿದೆ? 2 ವರ್ಷಗಳಿಂದ ಬೆಳೆ ನಷ್ಟ ಅನುಭವಿಸಿದ ರಾಜ್ಯದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಬಹುಶಃ ವಿಮೆ ಕಂಪನಿಗಳ ಜೊತೆ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಂತೆ ಮೇಲ್ನೋಟಕ್ಕೆ ಕಾಣುತ್ತಿದೆ" ಎಂದು ಹೇಳಿದ್ದಾರೆ.
"ಸರ್ಕಾರವು, ಕೊರೊನಾ ಸಾಂಕ್ರಾಮಿಕ ಹಾಗೂ ಲಾಕ್ಡೌನ್ ಸಮಯದಲ್ಲಿ ಮಾರುಕಟ್ಟೆ ಅವಕಾಶಗಳನ್ನು ಒದಗಿಸದೇ ಇದ್ದ ಕಾರಣ ರೈತರು ನಷ್ಟ ಅನುಭವಿಸಿದ್ದಾರೆ. ಕರ್ನಾಟಕದಲ್ಲಿ ಕೃಷಿಕರು ಅನಾಥರಾಗಿದ್ದಾರೆ" ಎಂದಿದ್ದಾರೆ.
"ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಲಾಕ್ಡೌನ್ ವೇಳೆಯಲ್ಲಿ ರೈತರಿಗೆ ಪರಿಹಾರ ನೀಡಲಿಲ್ಲ. ಈ ಎಲ್ಲಾ ಘೋಷಣೆಗಳು ಕಾಗದದಲ್ಲಿ ಮಾತ್ರವೇ ಉಳಿದಿದೆ. ಮನೆ ಕಳೆದುಕೊಂವರಿಗೆ 5 ಲಕ್ಷ ಹಾಗೂ ಭಾಗಶಃ ಮನೆ ಹಾನಿಗೊಳಗಾದವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ, ಈವರೆಗೆ ಯಾರಿಗೂ ಈ ಪರಿಹಾರ ಸಿಕ್ಕಿಲ್ಲ" ಎಂದು ಆರೋಪಿಸಿದ್ದಾರೆ.