ಜೈಪುರ, ನ.25 (DaijiworldNews/PY): ರಾಜಸ್ತಾನ ಸರ್ಕಾರದ ನೂತನ ಸಚಿವರಾಗಿ ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ ರಾಜೇಂದ್ರ ಸಿಂಗ್ ಗುಢಾ ಅವರು ರಸ್ತೆ ನಿರ್ಮಾಣದ ಬಗ್ಗೆ ಹೇಳಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ರಾಜಸ್ಥಾನದ ಜಂಜುನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಅವರ ಕೆನ್ನೆಯಷ್ಟು ಸೊಗಸಾದ ರಸ್ತೆಗಳನ್ನು ಮಾಡಿಸುತ್ತೇನೆ" ಎಂದು ಭರವಸೆ ನೀಡಿದ್ದಾರೆ.
ಆರಂಭದಲ್ಲಿ ಸಚಿವರು, ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಗಳಂತೆ ನುಣುಪಾಗಿ ನಿರ್ಮಿಸಲು ತಿಳಿಸಿದ್ದರು. ಬಳಿಕ ಈಗ ಯಾವ ನಟಿ ಅಲೆ ಎಬ್ಬಿಸಿದ್ದಾರೆ ಎಂದು ಜನರಲ್ಲಿ ಕೇಳಿದ್ದು, ಆ ವೇಳೆ ಕತ್ರೀನಾ ಕೈಫ್ ಅವರ ಹೆಸರು ಪ್ರಸ್ತಾಪವಾಗಿದೆ ಎಂದು ವರದಿಯಾಗಿದೆ.
ರಾಜೇಂದ್ರ ಸಿಂಗ್ ಗುಢಾ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯಲ್ಲಿ ಟಿಕೆಟ್ ಪಡೆದು ಗೆಲುವು ಸಾಧಿಸಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ರಾಜಕಾರಣಿಗಳು ರಸ್ತೆಗಳನ್ನು ಸೆಲೆಬ್ರಿಟಿಗಳ ಕೆನ್ನೆಗೆ ಹೋಲಿಕೆ ಮಾಡುವುದು ಇದೇ ಮೊದಲೇನಲ್ಲಿ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು 2015ರಲ್ಲಿ ಹೇಮಾಮಾಲಿನಿ ಅವರ ಕೆನ್ನೆಯಂತೆ ನಯವಾದ ರಸ್ತೆಗಳನ್ನು ಮಾಡಿಸುವ ಭರವಸೆ ನೀಡಿದ್ದರು.
2019ರಲ್ಲಿ ಮಧ್ಯಪ್ರದೇಶದ ಕಾನೂನು ಸಚಿವ ಪಿ.ಸಿ. ಶರ್ಮಾ ಅವರು ಸಹ ಇದೇ ರೀತಿಯಾದ ಹೇಳಿಕೆ ನೀಡಿದ್ದು, ರಾಜ್ಯದ ರಸ್ತೆಗಳು ಕನಸಿನ ಹುಡುಗಿಯ ಕೆನ್ನೆಯ ರೀತಿ ಬದಲಾಗಲಿದೆ ಎಂದಿದ್ದರು. ಉತ್ತರ ಪ್ರದೇಶದ ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಸಚಿವ ರಾಜಾರಾಮ್ ಪಾಂಡೆ 2013ರಲ್ಲಿ ಪ್ರತಾಪಗಢ ಜಿಲ್ಲೆಯಲ್ಲಿರುವ ರಸ್ತೆಗಳನ್ನು ಹೇಮಾಮಾಲಿನಿ ಹಾಗೂ ಮಾಧುರಿ ದೀಕ್ಷಿತ್ ಕೆನ್ನೆಯಂತೆ ಸೊಗಸಾಗಿ ಮಾಡಲಾಗುವುದು ಎಂದಿದ್ದರು.