ನವದೆಹಲಿ, ನ.25 (DaijiworldNews/PY): "ಪ್ರತಿಬಾರಿ ದೆಹಲಿಗೆ ಬಂದಾಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಅವರನ್ನು ಭೇಟಿಯಾಗುವುದು ಕಡ್ಡಾಯೇನು?. ಅದೇನು ಸಾಂವಿಧಾನಿಕ ಪ್ರಕ್ರಿಯೆಯೇ?" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ನಾಲ್ಕು ದಿನಗಳ ಭೇಟಿಗಾಗಿ ದೆಹಲಿ ಪ್ರವಾಸ ಕೈಗೊಂಡಿದ್ದು, ಗುರುವಾರ ಪಶ್ಚಿಮ ಬಂಗಾಳಕ್ಕೆ ಹಿಂದಿರುಗುತ್ತಿದ್ದಾರೆ.
ಹಿಂದಿರುಗುವ ಮುನ್ನ ಕಾಂಗ್ರೆಸ್ ನಾಯಕಿಯನ್ನು ಭೇಟಿ ಮಾಡುವಿರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಪ್ರತಿಬಾರಿ ದೆಹಲಿಗೆ ಬಂದಾಗ ಅವರನ್ನು ಭೇಟಿಯಾಗುವುದ ಕಡ್ಡಾಯವೇನು?" ಎಂದು ಪ್ರಶ್ನಿಸಿದ್ದಾರೆ.
ಬಳಿಕ ಮಾತನಾಡಿದ ಅವರು, "ಡಿ.1ರಂದು ಮುಂಬೈಗೆ ತೆರಳಲಿದ್ದು, ಅಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುತ್ತೇನೆ" ಎಂದು ತಿಳಿಸಿದ್ದಾರೆ.
"ಅವರನ್ನು ಭೇಟಿಯಾಗಲು ನಾನು ಸಮಯ ಕೇಳಿಲ್ಲ. ಅವರು ಪಂಜಾಬ್ ವಿಧಾನಸಭಾ ಚುನಾವಣೆಯ ತಯಾರಿಯಲ್ಲಿ ನಿರತರಾಗಿದ್ದಾರೆ ಎಂದು ನನಗೆ ಗೊತ್ತಿದೆ. ಅವರ ಪಕ್ಷಕ್ಕಾಗಿ ಅವರು ಕೆಲಸ ಮಾಡಿಕೊಳ್ಳಲಿ" ಎಂದಿದ್ದಾರೆ.
"ತೃಣಮೂಲ ಕಾಂಗ್ರೆಸ್, ತ್ರಿಪುರ ಹಾಗೂ ಗೋವಾದಿಂದ ಆರಂಭಿಸಿ ಪಶ್ಚಿಮ ಬಂಗಾಳದ ಆಚೆಗೂ ತನ್ನ ನೆಲೆಯನ್ನು ವಿಸ್ತರಣೆ ಮಾಡಲಿದೆ" ಎಂದು ತಿಳಿಸಿದ್ದಾರೆ.