ಬೆಂಗಳೂರು, ನ.24 (DaijiworldNews/PY): "ಲಖನ್ ಜಾರಕಿಹೊಳಿ ಬಂಡಾಯಕ್ಕೆ ಬಾಲಚಂದ್ರ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧವೂ ಇದೇ ಶಿಸ್ತು ಕ್ರಮ ಕೈಗೊಳ್ಳುವ ಧೈರ್ಯವಿದೆಯೇ ಬಿಜೆಪಿಗೆ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ' ಎಂಬಂತೆ ಮಂಥರ್ ಗೌಡ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವುದಕ್ಕೆ ಎ. ಮಂಜು ಅವರ ವಿರುದ್ಧ ಬಿಜೆಪಿಯ ಶಿಸ್ತು ಕ್ರಮ! ಲಖನ್ ಜಾರಕಿಹೊಳಿ ಬಂಡಾಯಕ್ಕೆ ಬಾಲಚಂದ್ರ & ರಮೇಶ್ ಜಾರಕಿಹೊಳಿ ವಿರುದ್ಧವೂ ಇದೇ ಶಿಸ್ತು ಕ್ರಮ ಕೈಗೊಳ್ಳುವ ಧೈರ್ಯವಿದೆಯೇ ಬಿಜೆಪಿಗೆ? ಅಥವಾ ಉತ್ತರನ ಪುರುಷ ಒಲೆಯ ಮುಂದೆ ಮಾತ್ರವೇ? ಎಂದು ಕೇಳಿದೆ.
"ಬೆಂಗಳೂರು ಸಬ್ ಅರ್ಬನ್ ರೈಲ್ವೇ ವಿಚಾರದಲ್ಲಿ ಬಿಜೆಪಿ ಹಳಿ ಇಲ್ಲದ ರೈಲು ಬಿಟ್ಟಿದ್ದೇ ಹೆಚ್ಚು! ಯೋಜನೆ ಪೂರ್ಣಗೊಳಿಸಲು 6 ವರ್ಷಗಳ ಕಾಲಮಿತಿಯಲ್ಲಿ ಯಾವುದೇ ಪ್ರಗತಿ ಇಲ್ಲದೆ ಒಂದು ವರ್ಷ ಕಳೆದುಹೋಗಿದೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಭಾರಿ ಅಭಿವೃದ್ಧಿಯಾಗುತ್ತದೆ ಎಂದ ಬಿಜೆಪಿಯ ಅಸಲಿತನ ಇದು. ಈ ವಿಳಂಬ ಚುನಾವಣೆಯ ಪಿಆರ್ ಸ್ಟಂಟ್ಗಾಗಿಯೇ?" ಎಂದು ಪ್ರಶ್ನಿಸಿದೆ.
"ಬಿಜೆಪಿಯ ಬ್ರಹ್ಮಾಸ್ತ್ರ ಗುಬ್ಬಿಯ ಮೇಲೆ ಮಾತ್ರ. ಮಂಜು ಅವರಿಗೆ ನೀಡಿದ್ದ ಪಕ್ಷದ ಜವಾಬ್ದಾರಿಯನ್ನು ಬಿಜೆಪಿ ವಾಪಸ್ ಪಡೆದಿದೆ. ಶರತ್ ಬಚ್ಚೇಗೌಡರ ಬಂಡಾಯಕ್ಕೆ ಬಚ್ಚೇಗೌಡರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಲಖನ್ ಜಾರಕಿಹೊಳಿ ಬಂಡಾಯಕ್ಕೆ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಬಿಜೆಪಿ ಅಂಗಡಿಯಲ್ಲಿ ಪ್ರಭಾವ ನೋಡಿ ಸುಣ್ಣ, ಬೆಣ್ಣೆ ಹಂಚಲಾಗುತ್ತಿದೆ" ಎಂದು ಕಾಂಗ್ರೆಸ್ ಕಿಡಿಕಾರಿದೆ.