ನವದೆಹಲಿ, ನ 24 (DaijiworldNews/MS): ಕೊವಿಡ್ 19ನಿಂದ ಮೃತಪಟ್ಟವರ ನೈಜವಾದ ಅಂಕಿಅಂಶಗಳನ್ನು ಬಿಡುಗಡೆ ಮಾಡುವಂತೆ ಹಾಗೂ ಕೊವಿಡ್19ನಿಂದ ಮೃತರಾದವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಎರಡು ಬೇಡಿಕೆಗಳಿವೆ ಎಂದು ಹೇಳಿದ್ದಾರೆ.ಮೊದಲನೆಯದಾಗಿ , ಕೊವಿಡ್ ನಿಂದ ಸಾವನ್ನಪ್ಪಿದವರ ನೈಜವಾದ ಅಂಕಿ-ಸಂಖ್ಯೆಯನ್ನು ಬಿಡುಗಡೆ ಮಾಡಬೇಕು . ಎರಡನೇದಾಗಿ ಕೊರೊನಾ ಸೋಂಕಿಗೆ ತುತ್ತಾಗಿ ಮೃತರಾದವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ರಚಿಸಿದರೆ ಸಾಕಾಗದು, ಸಂಕಷ್ಟದಲ್ಲಿರುವ ಜನರಿಗೆ ಸಹಕಾರ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದಲ್ಲದೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಇತರ ರಾಜ್ಯಗಳಿಗೆ ಮಾನದಂಡ ಎಂದು ಬಿಂಬಿಸಿರುವ “ಗುಜರಾತ್ ಮಾದರಿ” ಕುರಿತು ಎಂದು ಟೀಕಿಸಿರುವ ವೀಡಿಯೊವನ್ನು ಗಾಂಧಿ ಟ್ವೀಟ್ ಮಾಡಿದ್ದಾರೆ. "ಗುಜರಾತ್ ನಲ್ಲಿ ಕೊವಿಡ್ನಿಂದ ತತ್ತರಿಸುತ್ತಿರುವ ಜನರು ಆಸ್ಪತ್ರೆಗಳಲ್ಲಿ ಬೆಡ್ಗಳಿಲ್ಲದೆ ಪರದಾಡುತ್ತಿದ್ದಾಗ ನೀವ್ಯಾರೂ ಸಹಾಯಕ್ಕೆ ಬಂದಿಲ್ಲ. ಜನರು ತಮ್ಮ ಪ್ರೀತಿಪಾತ್ರರಿಗೆ ಚಿಕಿತ್ಸೆ ಕೊಡಿಸಲು 10-15 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿ ಬಂದಾಗಲೂ ನೀವು ನೆರವು ನೀಡಲಿಲ್ಲ. ಇದೀಗ ಮೃತರ ಕುಟುಂಬಕ್ಕೆ ಯೋಗ್ಯ ರೀತಿಯಲ್ಲಿ ಪರಿಹಾರ ನೀಡಲೂ ಮುಂದಾಗುತ್ತಿಲ್ಲ. ನಿಮ್ಮದು ಇದ್ಯಾವ ಮಾದರಿಯ ಸರ್ಕಾರ? "ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.