ಕಲಬುರಗಿ, ನ.24 (DaijiworldNews/PY): ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಶಾಂತಗೌಡ ಬಿರಾದರ್ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಿದರು.
ಬೆಳಗ್ಗೆ ಆರಂಭವಾದ ದಾಳಿ ಮಧ್ಯಾಹ್ನದವರೆಗೂ ಮುಂದುವರಿದಿದ್ದು, ನೀರಿನ ಪೈಪ್ನಲ್ಲಿ ನೀರಿನ ಬದಲು ಕಂತೆ ಕಂತೆ ಹರಿಯುತ್ತಿರುವುದನ್ನು ಕಂಡು ಎಸಿಬಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಎಸಿಬಿ ದಾಳಿ ವಿಚಾರ ತಿಳಿಯುತ್ತಿದ್ದಂತೆ ಶಾಂತಗೌಡ ಹತ್ತು ನಿಮಿಷದ ಮುಂದೆ ಹಣವನ್ನು ಪೈಪ್ನಲ್ಲಿ ಬಿಸಾಕಿದ್ದರು. ಈ ಹಿನ್ನೆಲೆ ಪೊಲೀಸರು ಪ್ಲಂಬರ್ ಅನ್ನು ಕರೆಸಿ ಪೈಪ್ ಕಟ್ ಮಾಡಿಸಿ ಹಣ ಹುಡುಕಿಸಿದ್ದಾರೆ.
ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಮನೆ ಹಾಗೂ ಜಿಲ್ಲೆಯ ಯಡ್ರಾಮಿಯಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿ ಅಕ್ರಮ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಶಾಂತಗೌಡ ಬಿರಾದಾರ್ ಅವರ ಮನೆಯಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ ಎನ್ನಲಾಗಿದೆ.
ಶಾಂತಗೌಡ ಅವರ ಆಸ್ತಿಗಳಿರುವ ಮೂರು ಕಡೆ ಎಸಿಬಿ ದಾಳಿ ನಡೆಸಿದ್ದಾರೆ. ಎಸಿಬಿ ದಾಳಿ ವೇಳೆ ಅಕ್ರಮ ಆಸ್ತಿಯ ದಾಖಲೆಗಳು ಪತ್ತೆಯಾಗಿದ್ದು, ಬಾಡಿಗೆ ನೀಡಿರುವ ಮನೆಗಳ ದಾಖಲಾತಿಯೂ ಲಭ್ಯವಾಗಿವೆ. ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿ ಮೃಂತಸ್ತಿನ ಹಾಗೂ ಬಡೆಪುರದಲ್ಲಿ ಭವ್ಯ ಬಂಗಲೆಯಿದ್ದು, ವಿವಿ ರಸ್ತೆಯಲ್ಲಿ ಎರಡು ನಿವೇಶನಗಳನ್ನು ಹೊಂದಿದ್ದಾರೆ. ಇನ್ನು ಯಡ್ರಾಮಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ 25 ಎಕರೆ ಫಾರ್ಮ್ ಹೌಸ್ ಪತ್ತೆಯಾಗಿದ್ದು, 10 ಎಕರೆ ಜಮೀನು ಪತ್ತೆಯಾಗಿದೆ. ಹಂಗರಾಮಗಾ ಗ್ರಾಮದ ಫಾರ್ಮ್ನಲ್ಲಿ ಎರಡು ಭವ್ಯ ಬಂಗಲೆಯಿದೆ.
ಬೆಂಗಳೂರಿನಲ್ಲೂ ಸಹ ಆಸ್ತಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ, ಎರಡು ಕಾರು, ಎರಡು ಬೈಕ್ ಸೇರಿದಂತೆ ವಾಹನಗಳು ಪತ್ತೆಯಾಗಿವೆ. ಕಲಬುರಗಿ ನಗರದ ಬ್ರಹ್ಮಪುರ ಬಡಾವಣೆ ಕೋಟನೂರ್ ಡಿ ಬಡಾವಣೆಯಲ್ಲಿ ಸಹ ತಲಾ ಎರಡು ಸೈಟ್ ಪತ್ತೆಯಾಗಿವೆ.
ಎಸಿಬಿ ಅಧಿಕಾರಿಗಳು ಶಾಂತಗೌಡ ಅವರ ಮನೆಯ ಮೂಲೆ ಮೂಲೆಗಳನ್ನೂ ಶೋಧ ನಡೆಸಿದ್ದು, ಮಗನ ಬೆಡ್ ರೂಂ ನಲ್ಲೂ 40 ಲಕ್ಷ ರೂ. ನಗದು ದೊರೆತಿದೆ. ಎಲ್ಲಾ ಹಣವನ್ನು ಅಧಿಕಾರಿಗಳು ಬಕೆಟ್ನಲ್ಲಿ ತುಂಬಿಟ್ಟಿದ್ದಾರೆ.
ಶಾಂತಗೌಡ ಬಿರಾದರ್ ಅವರು 1992 ಜಿಲ್ಲಾ ಪಂಚಾಯತ್ ಆಳಂದನಲ್ಲಿ ಕಿರಿಯ ಅಭಿಯಂತರ ಹಂಗಾಮಿ ನೌಕರನಾಗಿ ಸೇರ್ಪಡೆಯಾಗಿದ್ದರು. 2000ರಲ್ಲಿ ಖಾಯಂ ನೌಕರನಾಗಿ ಸೇರ್ಪಡೆಯಾಗಿದ್ದು, ಆಳಂದ, ವಿಜಯನಗರ ಜಿಲ್ಲೆಯ ಆಲಮೇಲ್, ಬೆಳಗಾವಿ ಹಾಗೂ ಜೇವರ್ಗಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.