ಮುಂಬೈ, ನ.24 (DaijiworldNews/PY): "ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರಯಾಣಿಸುತ್ತಿದ್ದ ನೋಂದಣಿ ಸಂಖ್ಯೆ ಫಲಕ ಇಲ್ಲದ ವಾಹನ ಚಾಲಕನಿಗೆ ಪೊಲೀಸರು 200 ರೂ ದಂಡ ವಿಧಿಸಿದ್ದಾರೆ" ಎಂದು ಬುಧವಾರ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಓವೈಸಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸು ಸಲುವಾಗಿ ಮಂಗಳವಾರ ಸೊಲ್ಲಾಪುರಕ್ಕೆ ಬಂದಿದ್ದರು, ಈ ವೇಳೆ ಅರು ಸದರ್ ಬಜಾರ್ನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅಲ್ಲಿ ಕರ್ತವ್ಯದ ಮೇಲಿದ್ದ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಚಿಂತನಕಿಡಿ ಅವರು ವಾಹನಕ್ಕೆ ನೋಂದಣಿ ಸಂಖ್ಯೆ ಫಲಕ ಇಲ್ಲದಿರುವುದನ್ನು ಕಂಡು, ಚಾಲಕನಿಗೆ ದಂಡ ವಿಧಿಸಿದ್ದಾರೆ.
"ಈ ವಿಚಾರ ತಿಳಿಯುತ್ತಿದ್ದಂತೆ ಓವೈಸಿ ಅವರ ಬೆಂಬಲಿಗರು ಸ್ಥಳಕ್ಕೆ ಧಾವಿಸಿದ್ದು, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಹಿತಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ವಾಹನ ಚಾಲಕನ ವಿರುದ್ದ ಕ್ರಮ ಜರುಗಿಸಿದ್ದಕ್ಕಾಗಿ ಸೊಲ್ಲಾಪುರ ಪೊಲೀಸ್ ಕಮೀಷನರ್ ಹರೀಶ್ ಬೈಜಲ್ ಅವರು ರಮೇಶ್ ಅವರಿಗೆ 5,000 ರೂ. ಬಹುಮಾನ ನೀಡಿ ಗೌರವಿಸಿದ್ದಾರೆ" ಎಂದಿದ್ದಾರೆ.