ಬೆಂಗಳೂರು, ನ 24 (DaijiworldNews/MS): ಸಿದ್ದರಾಮಯ್ಯ ಅವರ ಮೌನದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭಾರತೀಯ ಜನತಾ ಪಾರ್ಟಿಯೂ ವ್ಯಂಗ್ಯವಾಗಿ ಎಚ್ಚರಿಸಿದ್ದು, " ಸಿದ್ದರಾಮಯ್ಯ ಮುನಿಸಿಕೊಂಡಾಗಲೆಲ್ಲ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಾರೆ. ಅಲ್ಲಿಂದ ಪ್ರಯೋಗಿಸುವ ರಾಜಕೀಯ ದಾಳ ಯಾರ್ಯಾರ ಬುಡ ಅಲ್ಲಾಡಿಸಿದೆ ಎಂಬುದು ನಿಮಗೆ ನೆನಪಿರಬಹುದಲ್ಲವೇ? "ಎಂದು ಕುಹಕವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ " ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ,ಸಿದ್ದರಾಮಯ್ಯ ಅವರ ಮೌನ ತುಂಬಾ ಅಪಾಯಕಾರಿಯಾಗಿದ್ದು, ಮುನಿಸಿಕೊಂಡಾಗಲೆಲ್ಲ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಾರೆ. ಅಲ್ಲಿಂದ ಪ್ರಯೋಗಿಸುವ ರಾಜಕೀಯ ದಾಳ ಯಾರ್ಯಾರ ಬುಡ ಅಲ್ಲಾಡಿಸಿದೆ ಎಂಬುದು ನಿಮಗೆ ನೆನಪಿರಬಹುದಲ್ಲವೇ?
ಪದಾಧಿಕಾರಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲೂ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಯುದ್ಧ ನಡೆಯುತ್ತಿದೆ. ಆದರೆ ಪರಿಷತ್ ಚುನಾವಣೆ ವಿಚಾರದಲ್ಲಿ ಬೇಸರಗೊಂಡಿರುವ ಸಿದ್ದರಾಮಯ್ಯ ಅವರೀಗ ಬೇರೆಯದೇ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರೇ, ನಿಮ್ಮ ಮೌನವು ಬೇರೇನೋ ಸೂಚಿಸುತ್ತಿರುವುದು ನಿಜವಲ್ಲವೇ?
ಸಿದ್ದರಾಮಯ್ಯ ಹಾಗೂ ಡಿಕೆಶಿ ಕಾಂಗ್ರೆಸ್ ಪಕ್ಷದ ಎರಡು ಕಣ್ಣು ಇದ್ದಂತೆ ಎಂದು ಪರಮೇಶ್ವರ್ ಅವರು ಇತ್ತೀಚೆಗೆ ಬಣ್ಣಿಸಿದ್ದರು.ಆದರೆ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆಯ ವೇಳೆ ಈ ಎರಡು ಕಣ್ಣುಗಳ ದೃಷ್ಟಿ ಸಾಮರ್ಥ್ಯ ಬಯಲಾಗಿದೆ. ಡಿಕೆಶಿ ನೀಡಿದ ಪಟ್ಟಿಯ ಬಗ್ಗೆ ಸಿದ್ದರಾಮಯ್ಯ ದಿವ್ಯ ಮೌನ ತಳೆದಿರುವುದೇಕೆ? ಎಂದು ವ್ಯಂಗ್ಯವಾಡಿದೆ..
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಒಳಜಗಳ ಬಯಲಾಗಿದೆ. ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಿಂದಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೂರ ಉಳಿದಿದ್ದಾರೆ. ಏನಿದರರ್ಥ? ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ ಎಂದು ವ್ಯಂಗ್ಯವಾಗಿ ಎಚ್ಚರಿಸಿದೆ.