ತಿರುವನಂತಪುರಂ, ನ.24 (DaijiworldNews/PY): ದತ್ತು ವಿವಾದಕ್ಕೆ ಸಿಲುಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಅನುಪಮಾ ದಂಪತಿಗೆ ಕೊನೆಗೂ ಜಯ ಸಿಕ್ಕಿದ್ದು, ಡಿಎನ್ಎ ಪರೀಕ್ಷೆಯಲ್ಲಿ ನಿಜವಾದ ಹೆತ್ತವರು ಅವರೆಂದು ಸಾಬೀತಾಗಿದೆ.
ಅನುಪಮಾ ಹಾಗೂ ಅಜಿತ್ ಕುಮಾರ್ ಅವರು ಪರಸ್ಪರ ಪ್ರೇಮಿಸಿ ವಿವಾಹವಾಗಿದ್ದು, ಇವರಿಗೆ ಗಂಡು ಮಗು ಜನಿಸಿತ್ತು. ಆದರೆ, ಅನುಪಮಾ ತಂದೆ ಆಕೆಯ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಅನುಪಮಾ ಅವರಿಗೆ ಮಗು ಜನಿಸಿದ ಮೂರನೇ ದಿನಕ್ಕೆ ಮಗು ನಾಪತ್ತೆಯಾಗಿದ್ದು, ಅನುಪಮಾ ಅವರ ಒಪ್ಪಿಗೆ ಇಲ್ಲದೆ ಆಕೆಯ ಹೆತ್ತವರು ಮಗುವನ್ನು ಅನಾಥಾಶ್ರಮಕ್ಕೆ ಒಪ್ಪಿಸಿದ್ದರು. ಈ ಮಗುವನ್ನು ಆಂಧ್ರಪ್ರದೇಶದ ದಂಪತಿ ದತ್ತು ಪಡೆದು ಒಂದು ವರ್ಷದಿಂದ ಆರೈಕೆ ಮಾಡುತ್ತಿದ್ದರು. ಇವರು ಆರೈಕೆ ಮಾಡುತ್ತಿದ್ದ ಒಂದು ವರ್ಷದ ಮಗ ಕೇರಳದ ಅನುಪಮಾ ಎಸ್ ಚಂದ್ರನ್ ಅವರ ಮಗುವಾಗಿದೆ. ಮಗುವಿಗೆ ಜನ್ಮ ನೀಡಿದ ಕೂಡಲೇ ಅದನ್ನು ತನ್ನ ಹೆತ್ತವರು ಅಪಹರಿಸಿ ನನ್ನ ಅನುಮತಿ ಇಲ್ಲದೇ ಕೇರಳ ರಾಜ್ಯ ಕಲ್ಯಾಣ ಮಂಡಳಿಯ ಮೂಲಕ ದತ್ತು ನೀಡಿದ್ದರು ಎಂದು ಅನುಪಮಾ ಆರೋಪಿಸಿದ್ದರು.
ಅನುಪಮಾ ಎಸ್ ಚಂದ್ರನ್ ಹಾಗೂ ಅವರ ಪತಿ ಅಜಿತ್ ಅವರು ತನ್ನ ಮಗುವನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ಕೆಎಸ್ಸಿಸಿಡಬ್ಲ್ಯೂ ಕಚೇರಿಯ ಎದುಕರು ಕೆಲವು ದಿನಗಳಿಂದ ಧರಣಿ ನಡೆಸುತ್ತಿದ್ದರು. ಅದೇ, ವೇಳೆಗೆ ಮಕ್ಕಳ ಕಲ್ಯಾಣ ಆಯೋಗವು ನವೆಂಬರ್ 18ರಂದು ಆದೇಶವನ್ನು ಹೊರಡಿಸಿ, ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು ಕೆಎಸ್ಸಿಸಿಡಬ್ಲ್ಯೂಗೆ ನಿರ್ದೇಶನ ನೀಡಿದೆ.
ಈ ಆದೇಶದ ನಂತರ ಕೆಎಸ್ಸಿಸಿಡಬ್ಲ್ಯೂ ಅಧಿಕಾರಿಗಳ ನೇತೃತ್ವದ ತಂಡ ಆಂಧ್ರಪ್ರದೇಶಕ್ಕೆ ತೆರಳಿ ದಂಪತಿಯಿಂದ ಮಗುವನ್ನು ವಾಪಾಸ್ ಪಡೆದಿದೆ. ಸಿಡಬ್ಲ್ಯೂಸಿಯ ಆದೇಶದ ಪ್ರಕಾರ, ಮಗುವಿನ ಜೈವಿನ ಪೋಷಕರನ್ನು ಕಂಡುಹಿಡಿಯಲು ಡಿಎಸ್ಎ ಪರೀಕ್ಷೆಯ ಸಹಾಯ ತೆಗೆದುಕೊಳ್ಳಲಾಗಿತ್ತು.
ಅಂತಿಮವಾಗಿ ಡಿಎನ್ಎ ಪರೀಕ್ಷೆಯ ವರದಿ ಬಂದಿದ್ದು, ಮಗು ಅನುಪಮಾ ಹಾಗೂ ಅಜಿತ್ ಅವರ ಸಂತಾನ ಎಂದು ದೃಢಪಟ್ಟಿದ್ದು, ಮಗು ಹೆತ್ತ ತಾಯಿಯ ಮಡಿಲು ಸೇರಿದೆ.