ಚಂಡೀಗಡ, ನ 23 (DaijiworldNews/MS): ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯದ ಪ್ರವಾಸದಲ್ಲಿರುವ ಆಪ್ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ , "ಕಾಂಗ್ರೆಸ್ ಪಕ್ಷದ ಕನಿಷ್ಠ 25 ಶಾಸಕರು ಆಪ್ ಸೇರಲು ಉತ್ಸುಕರಾಗಿದ್ದಾರೆ. ಆದರೆ ಎಎಪಿಗೆ 'ಕಾಂಗ್ರೆಸ್' ಕಸವನ್ನು ಸ್ವೀಕರಿಸಲು ಸಿದ್ಧರಿಲ್ಲ" ಎಂದು ಮಂಗಳವಾರ ಹೇಳಿದ್ದಾರೆ.
ಇತ್ತೀಚೆಗೆ ಒಂದಿಲ್ಲೊಂದು ವಿವಾದ ಎಬ್ಬಿಸುತ್ತಿರುವ ನವಜೋತ್ ಸಿಂಗ್ ಸಿಧು ಆಪ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಸುದ್ದಿ ಹರಡಿದೆ. ಇದು ನಿಜವಾ ಎಂದು ಮಾಧ್ಯಮ ಸಿಬ್ಬಂದಿ ಕೇಳಿದ ಪ್ರಶ್ನೆಗೆ ನಸು ನಕ್ಕು ಉತ್ತರಿಸಿದ ಅವರು, ಕಾಂಗ್ರೆಸ್ನ ಹಲವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಕಾಂಗ್ರೆಸ್ನ ಕಚಡಾ, ಕಸಕಡ್ಡಿಗಳನ್ನೇಕೆ ನಾವು ಸೇರಿಸಿಕೊಳ್ಳಬೇಕು. ಕಾಂಗ್ರೆಸ್ನ ಒಂದು ಕಸವನ್ನು ಸೇರಿಸಿಕೊಂಡರೂ ಅದರ ಹಿಂದೆ ಮತ್ತೆ 25 ಶಾಸಕರು, ಮೂವರು ಸಂಸದರು ಆ ಪಕ್ಷದಿಂದ ಬರುತ್ತಾರೆ ಎನ್ನುವುದ ಸ್ಪಷ್ಟ ಎಂದು ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಪಂಜಾಬ್ ಅಸೆಂಬ್ಲಿ ಚುನಾವಣೆ ಮೊದಲು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಪಂಜಾಬ್ ಚುನಾವಣೆಯಲ್ಲಿ ಆಪ್ ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದಿದ್ದರೂ, ನಮ್ಮ ಪಕ್ಷ ಗೆದ್ದರೆ ನಾನಂತೂ ಖಂಡಿತವಾಗಿಯೂ ಇಲ್ಲಿನ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಗೂ ಶಿರೋಮಣಿ ಅಕಾಲಿದಳ (ಎಸ್ಎಡಿ) ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಪಂಜಾಬ್ನಲ್ಲಿನ ಪ್ರಸ್ತುತ ಸರ್ಕಾರವು ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಕಣ್ಣೀರು ಹಾಕುತ್ತಿದೆ ಆದರೆ ಆ ಖಜಾನೆಗಳನ್ನು ಖಾಲಿ ಮಾಡಿದ್ದು ಯಾರು? ಕಳೆದ 15 ವರ್ಷಗಳಿಂದ ನೀವು ಅಧಿಕಾರದಲ್ಲಿದ್ದೀರಿ ತಾನೆ ಎಂದು ಪ್ರಶ್ನಿಸಿದ ಅವರು ಪಂಜಾಬ್ನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆದರೆ, ದೆಹಲಿಯನ್ನು ನಾವು ಹೇಗೆ ಬದಲಾಯಿಸಿದ್ದೇವೋ ಹಾಗೇ ಇದನ್ನೂ ಬದಲಿಸುತ್ತೇವೆ. ಪಂಜಾಬ್ ಖಜಾನೆ ಹೇಗೆ ತುಂಬಿಸಬೇಕು ಎಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.