ಲಕ್ನೋ, ನ 23 (DaijiworldNews/MS): ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ಕೃಷಿ ಕಾಯಿದೆ ಹಿಂದಕ್ಕೆ ಪಡೆದಂತೆ, ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿಯನ್ನೂ ಹಿಂದಕ್ಕೆ ಪಡೆಯಬೇಕು. ಮಾತ್ರವಲ್ಲದೆ ಒಂದು ವೇಳೆ ಬೇಡಿಕೆಯನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ.
ಬಾರಾಬುಂಕಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅಸಾದುದ್ದೀನ್ ಓವೈಸಿ, "ಸಿಎಎ ರದ್ದತಿ ಸಂಬಂಧಿಸಿದಂತೆ ದೆಹಲಿಯ ಶಹೀನ್ ಬಾಗ್ ನಲ್ಲಿ ನಡೆದ ಘಟನೆಗಳು ನಮ್ಮ ಮುಂದಿವೆ. ಅದು ಮರುಕಳಿಸದಂತೆ ನೋಡಿಕೊಳ್ಳುವುದು ಕೇಂದ್ರ ಸರಕಾರದ ಕರ್ತವ್ಯ. ಸಿಎಎ ಹಿಂಪಡೆಯುವಂತೆ ಒತ್ತಾಯಿಸಿ ಎಐಎಂಐಎಂ ಉತ್ತರ ಪ್ರದೇಶದಲ್ಲಿ ಬೀದಿಗಿಳಿಯಲಿದೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂಪಡೆಯಲು ನಾನು ಭಾರತೀಯ ಜನತಾ ಪಕ್ಷದ ಸರ್ಕಾರವನ್ನು ಒತ್ತಾಯಿಸುತ್ತೇನೆ.
ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿದ ರೀತಿಯಲ್ಲಿಯೇ ಸಿಎಎ ರದ್ದುಗೊಳಿಸಲು ಕೇಂದ್ರವು ಪರಿಗಣಿಸಬೇಕು ಎಂದು ಹೇಳಿದ್ದ್ದಾರೆ
ಸರಕಾರ ಎರಡು ಕಾಯಿದೆಯನ್ನು ಹಿಂದಕ್ಕೆ ಪಡೆಯದಿದ್ದರೆ, ಪ್ರತಿಭಟನಾಕಾರರು ರಸ್ತೆಯಲ್ಲಿ ಹಿಂಸಾಚಾರ ನಡೆಸಬೇಕಾಗುತ್ತದೆ. ಈ ಎರಡೂ ಕಾಯಿದೆಗಳು ಸಂವಿಧಾನಕ್ಕೆ ವಿರುದ್ದವಾದದ್ದು, ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಈ ಕಾಯಿದೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ನಾವೇ ಬೀದಿಗಿಳಿಯಬೇಕಾಗುತ್ತದೆ"ಎಂದು ಅಸಾದುದ್ದೀನ್ ಓವೈಸಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.