ನವದೆಹಲಿ, ನ.23 (DaijiworldNews/HR): ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಯೋಧರ ಸಂಘರ್ಷದಲ್ಲಿ ಹುತಾತ್ಮರಾದ ಕಮಾಂಡಿಂಗ್ ಆಫೀಸರ್ ಸಂತೋಷ್ ಬಾಬು ಅವರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಎರಡನೇ ಅತೀ ದೊಡ್ಡ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ನೀಡಿ ಗೌರವಿಸಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿಯನ್ನು ಬಾಬು ಪತ್ನಿ ಬಿ ಸಂತೋಷಿ ಮತ್ತು ತಾಯಿ ಮಂಜುಳಾ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಇನ್ನು ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಇತರ ನಾಲ್ವರು ಯೋಧರಾದ ನಾಯಿಬ್ ಸುಬೇದಾರ್ ನುದುರಾಮ್ ಸೊರೆನ್, ಹವಿಲ್ದಾರ್ (ಗನ್ನರ್) ಕೆ ಪಳನಿ, ನಾಯಕ್ ದೀಪಕ್ ಸಿಂಗ್ ಮತ್ತು ಸಿಪಾಯಿ ಗುರ್ತೇಜ್ ಸಿಂಗ್ ಅವರಿಗೆ ಮರಣೋತ್ತರವಾಗಿ ವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.