ಬೆಂಗಳೂರು, ನ.23 (DaijiworldNews/HR): ಜೆಡಿಎಸ್ ಪಕ್ಷದಲ್ಲಿ ಶಂಖ ಊದಲಿಕ್ಕೆ ಜನ ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಅವರು ಹೇಳಿದ್ದು ನಿಜ. ಎಲ್ಲ ಕಡೆ ಶಂಖ ಊದುವುದಕ್ಕೆ ನಾನೇ ಹೋಗಬೇಕು. ಎಲ್ಲೆಲ್ಲಿ ಶಂಖ ಊದಲು ಸಾಧ್ಯವಿದೆಯೋ ಅಂತಹ ಕಡೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಪಕ್ಷದ ಸ್ಥಳೀಯ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ, ಸಲಹೆ ಪಡೆದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಆರರಿಂದ ಎಂಟು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಈ ಮೊದಲೇ ನಾನು ಹೇಳಿದ್ದೆ" ಎಂದರು.
ಇನ್ನು "ನಮ್ಮ ಶಕ್ತಿಗನುಸಾರವಾಗಿ ಉಪ ಚುನಾವಣೆಗಳನ್ನು ಎದುರಿಸಿದ್ದೇವೆ. ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ಸ್ಪರ್ಧೆ ಮಾಡುತ್ತಿದ್ದೇವೆ. ನಮ್ಮ ಗುರಿ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಕಡೆಗಿದೆ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ" ಎಂದಿದ್ದಾರೆ.
"ಹಿಂದೆ ಗೆದ್ದ ಕೆಲವರು ನಮ್ಮ ಪಕ್ಷದಿಂದ ದೂರ ಆಗಿದ್ದಾರೆ. ಅದು ಮುಗಿದ ಅಧ್ಯಾಯ. ಪಕ್ಷಕ್ಕೆ ಕಾರ್ಯಕರ್ತರನ್ನು ಹೊರತುಪಡಿಸಿ ಯಾರು ಅನಿವಾರ್ಯವಲ್ಲ. ಕಾರ್ಯಕರ್ತರ ದುಡಿಮೆ ಮೇಲೆ ನಾಯಕರು ಸೃಷ್ಟಿಯಾಗುತ್ತಾರೆ" ಎಂದು ಹೇಳಿದ್ದಾರೆ.