ನವದೆಹಲಿ, ನ 23 (DaijiworldNews/MS): ಕೇಸರಿ ಧಿರಿಸುಗಳನ್ನು ಬದಲಾಯಿಸದಿದ್ದರೆ ಡಿಸೆಂಬರ್ 12 ರಂದು ದೆಹಲಿಯಲ್ಲಿ ರೈಲು ತಡೆಯುವುದಾಗಿ ಸಂತರು, ಸನ್ಯಾಸಿಗಳ ಎಚ್ಚರಿಕೆಯ ಬಳಿಕ ರಾಮಾಯಣ ಎಕ್ಸ್ ಪ್ರೆಸ್ ರೈಲಿನ ವೇಯ್ಟರ್ "ವಸ್ತ್ರ" ಸಂಹಿತೆಯಲ್ಲಿ ಬದಲಾವಣೆ ಮಾಡುತ್ತಿರುವುದಾಗಿ ಐಆರ್ ಸಿಟಿಸಿ, ಘೋಷಿಸಿದೆ.
ಐಆರ್ ಸಿಟಿಸಿ ನಿರ್ವಹಣೆ ಮಾಡುತ್ತಿರುವ ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿನ ವೇಯ್ಟರ್ ಗಳಿಗೆ ಕೇಸರಿ ದಿರಿಸುಗಳನ್ನು ವಸ್ತ್ರ ಸಂಹಿತೆಯನ್ನಾಗಿ ನೀಡಲಾಗಿತ್ತು. ಇದರ ವಿರುದ್ಧ ತೀವ್ರ ಆಕ್ಷೇಪ ಕೇಳಿಬಂದಿತ್ತು.ಇದು ಹಿಂದೂ ಧರ್ಮಕ್ಕೆ ಮಾಡುತ್ತಿರುವ ಅವಮಾನ ಎಂದು ಹಲವಾರು ಅಸಮಾಧಾನ ಹೊರಹಾಕಿದ್ದರು. ಮಾತ್ರವಲ್ಲದೆ ಮಧ್ಯಪ್ರದೇಶದ ಉಜ್ಜಯಿನಿಯ ಸಂತರ ತೀವ್ರ ವಿರೋಧ ವ್ಯಕ್ತಪಡಿಸಿಎಚ್ಚರಿಕೆ ನೀಡಿದ್ದರು. ಕೊನೆಗೂ ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಶರಣಾಗಿದ್ದು "ವಸ್ತ್ರ ಸಂಹಿತೆ"ಯಲ್ಲಿ ಬದಲಾವಣೆ ಮಾಡುವುದಾಗಿ ಹೇಳಿದೆ.
ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿ ಆಹಾರ ಹಾಗೂ ಇನ್ನಿತರ ಪದಾರ್ಥಗಳನ್ನು ಪ್ರಯಾಣಿಕರಿಗೆ ಪೂರೈಕೆ ಮಾಡುವ ವೇಯ್ಟರ್ ಗಳು ಕೇಸರಿ ದಿರಿಸನ್ನು ಧರಿಸುತ್ತಿರುವುದನ್ನು ವಿರೋಧಿಸಿ ನಾವು ಎರಡು ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು. ಕೇಸರಿ ವಸ್ತ್ರ, ಸಾಧುಗಳ ರೀತಿಯಲ್ಲಿ ಕೇಸರಿ ರುಮಾಲು, ರುದ್ರಾಕ್ಷಿಗಳನ್ನು ಧರಿಸುವುದು ಹಿಂದೂ ಧರ್ಮ ಹಾಗೂ ಸಂತರಿಗೆ ಮಾಡುವ ಅವಮಾನವಾಗಿದೆ" ಎಂದು ಉಜ್ಜೈನ್ ಅಖಾಡ ಪರಿಷತ್ ನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶ್ ಪುರಿ ಹೇಳಿದ್ದರು.
ಸಂತರ ಪ್ರತಿಭಟನೆಗೆ ಮಣಿದಿರುವ ಐಆರ್ ಸಿಟಿಸಿ ಟ್ವೀಟ್ ಮೂಲಕ ಮಹತ್ವದ ಪ್ರಕಟಣೆಯನ್ನು ತಿಳಿಸಿದ್ದು, "ರಾಮಾಯಣ ಎಕ್ಸ್ ಪ್ರೆಸ್ ರೈಲಿನಲ್ಲಿ ಸೇವೆಗಳನ್ನು ಒದಗಿಸುವ ಸಿಬ್ಬಂದಿಗಳ ವಸ್ತ್ರ ಸಂಹಿತೆಯನ್ನು ವೃತ್ತಿಪರ ದಿರಿಸಿಗೆ ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.