ಬೆಂಗಳೂರು, ನ 23 (DaijiworldNews/MS): ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಸ್ನೇಹಿತರ ನೆರವಿನಿಂದ ಪುತ್ರಿಯೇ ಕೊಲೆಗೈದಿರುವ ಘಟನೆ ಭಾನುವಾರ ತಡರಾತ್ರಿ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೀಪಕ್ ಕುಮಾರ್ ಸಿಂಗ್ (48)
ಅತ್ತೂರು ಲೇಔಟ್ ನಿವಾಸಿ ದೀಪಕ್ ಕುಮಾರ್ ಸಿಂಗ್ (48) ಕೊಲೆಯಾದಾತ. ಸಿಂಗ್ ತನ್ನ ಮಗಳಿಗೆ ಪ್ರತಿದಿನ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಹತಾಶಳಾದ ಆತನ ಮಗಳು ಪಿಯು ವಿದ್ಯಾರ್ಥಿಗಳಾದ ತನ್ನ ಸ್ನೇಹಿತರ ಸಹಾಯದಿಂದ ತಂದೆಯನ್ನು ಕೊಂದಿದ್ದಾಳೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ನಾಲ್ವರು ಪಿಯುಸಿ ವಿದ್ಯಾರ್ಥಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಶರು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ, ದೀಪಕ್ ಕುಮಾರ್ ಸಿಂಗ್ ತನ್ನ ಮಗಳಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಕ್ ಕುಮಾರ್ ಸಿಂಗ್, ಜಿಕೆವಿಕೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿ ಬಿಹಾರದಲ್ಲಿದ್ದಾರೆ. ಕಲಬುರಗಿ ಮೂಲದ ಮಹಿಳೆಯನ್ನು ಎರಡನೇ ವಿವಾಹವಾಗಿದ್ದು, ಇಬ್ಬರು ಪುತ್ರಿಯರು ಇದ್ದಾರೆ. ಈತ ಎರಡನೇ ಪತ್ನಿ, ಪುತ್ರಿಯರ ಜತೆ ಅಟ್ಟೂರು ಲೇಔಟ್ನ ವೀರ ಸಾಗರ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಮೊದಲ ಪುತ್ರಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಎರಡನೇ ಪುತ್ರಿ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.