ನವದೆಹಲಿ, ನ. 22 (DaijiworldNews/SM): ದೇಶದ ಇತಿಹಾಸದಲ್ಲೇ ಅಪರೂಪವೆಂಬಂತೆ ರೈತ ಹೋರಾಟವೊಂದು ಸರಕಾರದ ವಿರುದ್ಧ ಸಮರ ಸಾರಿ ಗೆಲುವು ತನ್ನದಾಗಿಸಿಕೊಂಡಿದೆ. ಆದರೆ, ಈ ಬಗ್ಗೆ ಅಧಿಕೃತವಾದ ತೀರ್ಮಾನ ಇನ್ನಷ್ಟೇ ಕೈಗೊಳ್ಳಬೇಕಿದೆ. ಬಹುತೇಕ ನವಂಬರ್ 24ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕಳೆದ ಒಂದು ವರ್ಷದಿಂದ ರೈತರ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ ಮಣಿದು ನವಂಬರ್ 19ರ ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ, ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರತಿಭಟನೆ ಕೈ ಬಿಡುವಂತೆಯೂ ಕೂಡ ಮನವಿ ಮಾಡಿಕೊಂಡಿದ್ದರು.
ಪ್ರಧಾನಿ ಮಾತಿಗೆ ಕಿವಿಗೊಡದ ರೈತರು !
ಇನ್ನು ಪ್ರಧಾನಿ ನರೇಂದ್ರ ಮೋದಿ ಕಾಯ್ದೆ ವಾಪಸ್ ಪಡೆಯುವ ಘೋಷಣೆಯಿಂದಾಗಿ ದೇಶದೆಲ್ಲೆಡೆ ಒಂದು ರೀತಿಯ ಸಂಚಲನ ಮೂಡಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾಯ್ದೆ ಹಿಂಪಡೆಯಲಾಗಿದೆ ಎನ್ನುವುದು ಪ್ರತಿಪಕ್ಷಗಳಾ ಟೀಕೆಯಾದರೆ, ತಿದ್ದುಪಡಿಗಳ ಜೊತೆ ಮತ್ತೆ ಕಾಯ್ದೆ ಮಂಡಿಸಲಾಗುತ್ತದೆ ಎಂದು ಆಡಳಿತ ಪಕ್ಷದವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ರೈತರು ಮಾತ್ರ ಇವ್ಯಾವುದಕ್ಕೂ ತಲೆ ಕೆಡಿಸದೆ ಪ್ರಧಾನಿ ಘೋಷಣೆಯನ್ನು ಕೂಡ ಒಪ್ಪದೆ, ಸಂಸತ್ ನಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರವಾಗುವ ತನಕ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದಿದ್ದಾರೆ.
ಸಂಸತ್ ನಲ್ಲಿ ಅಧಿಕೃತ ನಿರ್ಧಾರ ಕೈಗೊಳ್ಳಿ
ಇನ್ನು ಕಾಯ್ದೆ ಹಿಂಪಡೆದ ಬಗ್ಗೆ ಸಂಸತ್ ನಲ್ಲಿ ಈ ಹಿಂದೆ ಜಾರಿ ಸಂದರ್ಭ ಯಾವ ರೀತಿ ಒಪ್ಪಿಗೆ ಪಡೆದುಕೊಂಡಿದ್ದರು ಅದೇ ರೀತಿಯಲ್ಲಿ ನಿರ್ಧಾರ ಕೈಗೊಳ್ಳಿ ಆ ಬಳಿಕವೇ ನಾವು ಪ್ರತಿಭಟನೆ ಕೈ ಬಿಡುವುದು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿ ಅಂಗೀಕಾರವಾಗುವ ತನಕ ಪ್ರತಿಭಟನೆ ಮುಂದುವರೆಸಲಾಗುವುದೆಂದು ರೈತ ಸಂಘಟನೆಗಳು ಹೇಳಿವೆ. ಈ ನಡುವೆ ನವಂಬರ್ 27ರಂದು ಸಭೆ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. ಇನ್ನೊಂದೆಡೆ, ನವಂಬರ್ 29ರಂದು ಸಂಸತ್ ಭವನಕ್ಕೆ ಪಾದಯಾತ್ರೆ ನಡೆಸಲು ರೈತ ಸಂಘಟನೆಗಳು ಮುಂದಾಗಿವೆ.
ಈ ನಡುವೆ ಕೇಂದ್ರ ಸರಕಾರ ನವಂಬರ್ 24ರಂದು ಸಂಪುಟ ಸಭೆ ಕರೆದಿದ್ದು, ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿ ನಿರ್ಧಾರವಾಗುವ ಸಾಧ್ಯತೆ ಇದೆ.