ಪಣಜಿ, ನ.22 (DaijiworldNews/PY): "ಆಮ್ ಆದ್ಮಿ ಹಾಗೂ ಟಿಎಂಸಿ ಈ ಎರಡೂ ಪಕ್ಷಗಳು ಗೋವಾದಲ್ಲಿ ಬಿಜೆಪಿಯನ್ನು ಹೊಡೆದೋಡಿಸಲು ಬಂದಿಲ್ಲ. ಬದಲಾಗಿ, ಕಾಂಗ್ರೆಸ್ ಪಕ್ಷದ ವಿಭಜನೆ ಮಾಡಿ ಬಿಜೆಪಿಗೆ ಸಹಾಯ ಮಾಡಲು ಬಂದಿವೆ" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಗೋವಾದ ಥಿವಿಮ್ ಮತಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ಗೋವಾಕ್ಕೆ ಬಂದಿರುವ ನೂತನ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ತೆಗೆಯಲು ಬಂದಿಲ್ಲ. ಬದಲಾಗಿ ಅವರು ಬಿಜೆಪಿ ವಿರೋಧಿ ಮತಗಳ ವಿಭಜನೆ ಮಾಡಲು ಬಂದಿರುವಂತೆ ತೋರುತ್ತಿದೆ" ಎಂದಿದ್ದಾರೆ.
"ತೃಣಮೂಲ ಕಾಂಗ್ರೆಸ್ ಪಕ್ಷವು ಗೋವಾಕ್ಕೆ ಬಂದು ಕೆಲವೇ ತಿಂಗಳಿನಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಈ ಕಾರಣದಿಂದ ಕಾಂಗ್ರೆಸ್ ಪಕ್ಷದ ಮತಗಳು ವಿಭಜನೆಯಾಗುವು ಆತಂಕ ಉಂಟಾಗಿದೆ. ಬಿಜೆಪಿ ಇದರಿಂದ ಲಾಭ ಆಗುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.