ಚಿಕ್ಕೋಡಿ, ನ.22 (DaijiworldNews/PY): "ವಿಧಾನ ಪರಿಷತ್ ಚುನಾವಣಾ ಕಣದಲ್ಲಿ ಯಾವ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲವೋ ಆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ" ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಚಿಕ್ಕೋಡಿಯಲ್ಲಿ ಜನ ಸ್ವರಾಜ್ ಯಾತ್ರೆಯ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ಆಗಮಿಸಿದ್ದ ಸಂದರ್ಭ ಈ ವಿಚಾರವಾಗಿ ಮಾತನಾಡಿದ ಅವರು, "ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಸೂಚಿಸಬೇಕು" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.
"ವಿಧಾನ ಪರಿಷತ್ ಚುನಾವಣೆಗೆ ಈಗಾಗಲೇ ಬಿಜೆಪಿ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ತನ್ನದೇ ಆದ ಕಾರಣಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಇದರಿಂದಲೇ ಕಾಂಗ್ರೆಸ್ ಗೊಂದಲದಲ್ಲಿದೆ ಎಂದು ತಿಳಿಯುತ್ತದೆ" ಎಂದು ಲೇವಡಿ ಮಾಡಿದ್ಧಾರೆ.
"ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ 15 ಅಭ್ಯರ್ಥಿಗಳು ಜಯ ಗಳಿಸುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ" ಎಂದು ತಿಳಿಸಿದ್ದಾರೆ.
ಜನ ಸ್ವರಾಜ್ ಯಾತ್ರೆ ಬಗ್ಗೆ ವಿಪಕ್ಷಗಳ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ವಿಪಕ್ಷಗಳು ಯಾವುದೇ ಟೀಕೆ ಮಾಡದೇ ರಚನತ್ಮಕ ಸಲಹೆ ನೀಡಬೇಕು" ಎಂದಿದ್ದಾರೆ.
"ನಾನು ಸಿಎಂ ಆಗಿದ್ದ ಸಂದರ್ಭ, ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದೆ ಹಾಗೂ ಈಗ ಪ್ರಧಾನ ಮಂತ್ರಿಗಳು ಅಧಿಕಾರ ವಿಕೇಂದ್ರಿಕರಣದ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಿದ್ದಾರೆ. ಆಡಳಿತ ಸುಧಾರಣೆಯ ಸಲುವಾಗಿ ಹೊಸ ಜಿಲ್ಲೆ, ತಾಲೂಕು ಪಟ್ಟಣ ಪಂಚಾಯಿತಿ ಸೃಷ್ಟಿಸಿ ಸುಧಾರಣೆ ಮಾಡಲಿದ್ದೇವೆ" ಎಂದು ತಿಳಿಸಿದ್ದಾರೆ.
"ನಮ್ಮ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲನೇ ಸುತ್ತಿನಲ್ಲಿ ಜಯಗಳಿಸುತ್ತಾರೆ ಎನ್ನುವ ಭರವಸೆ ಇದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನದೇ ಅಭ್ಯರ್ಥಿಯನ್ನು ಘೋಷಿಸಿಲ್ಲ. ಇದೊಂದು ವಿಚಿತ್ರ ಪರಿಸ್ಥಿತಿ" ಎಂದು ವ್ಯಂಗ್ಯವಾಡಿದ್ದಾರೆ.