ಮೈಸೂರು, ನ.22 (DaijiworldNews/HR): ಈ ಸರ್ಕಾರಕ್ಕೆ ರೈತರಿಗೆ ಪರಿಹಾರ ಕೊಡಲು ನೀತಿ ಸಂಹಿತೆ ಅಡ್ಡಿಯಾಗುತ್ತದೆ. ಈ ಬೂಟಾಟಿಕೆ ಬಿಟ್ಟು ರೈತರಿಗೆ ಸೂಕ್ತ ಪರಿಹಾರ ನೀಡಿ ಎಂದು ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಸರ್ಕಾರದಲ್ಲಿ ಕೇವಲ ಘೋಷಣೆ ಮಾತ್ರ ಇದೆ. ಸ್ಥಳಕ್ಕೆ ಹೋಗಿ ಪರಿಹಾರ ಘೋಷಣೆ ಮಾಡುತ್ತಾರೆ. ಸರ್ಕಾರಕ್ಕೆ ಆಕಾಶ ಮಾತ್ರ ಕಾಣುತ್ತಿದೆ, ಭೂಮಿ ಕಾಣ್ತಿಲ್ಲ. ಚುನಾವಣೆಯಲ್ಲಿ ಗೆದ್ದಿದ್ದೀವಿ, ಗೆಲ್ಲುತ್ತೀವೆ ಎಂಬ ಭ್ರಮೆಯಲ್ಲಿದ್ದಾರೆ" ಎಂದಿದ್ದಾರೆ.
ಇನ್ನು "ರೈತರಿಗೆ ಪರಿಹಾರ ಕೊಡುವುದರಲ್ಲಿ ನೀತಿ ಸಂಹಿತೆ ಅಡ್ಡ ಬರಲ್ಲ. ಇದನ್ನ ಚುನಾವಣಾ ಆಯೋಗದ ಅನುಮತಿ ಪಡೆದು ಪರಿಹಾರ ಕೊಡಬಹುದು. ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ. ಆದರೆ ನನ್ನ ಪ್ರಕಾರದಲ್ಲಿ ಸರ್ಕಾರದಲ್ಲಿ ಹಣ ಇದೆ" ಎಂದರು.
ಸಂದೇಶ ನಾಗರಾಜ್ ಅವರು ಪಕ್ಷ ಬಿಟ್ಟು ಈಗಾಗಲೇ ಮೂರು ವರ್ಷ ಕಳೆದಿದ್ದು,ನನ್ನನ್ನು ಅವರು ಸಂಪರ್ಕ ಮಾಡಿಲ್ಲ, ನಾನು ಮಾಡಲ್ಲ. ಅವರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ" ಎಂದು ಹೇಳಿದ್ದಾರೆ.